ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ; ಕಬ್ಬಿನ ಬೆಲೆ ಹೆಚ್ಚಳದ ಹೋರಾಟದ ಮೇಲೆ ಕಾರ್ಖಾನೆ ಆಡಳಿತ ಮಂಡಳಿ ನಿಗಾ
ಮುದ್ದೇಬಿಹಾಳ: ರಾಜ್ಯದ ಸಕ್ಕರೆ ಕಾರ್ಖಾನೆಗಳ ಸಂಘವು ಕೈಗೊಳ್ಳುವ ತೀರ್ಮಾನದಂತೆ ನಮ್ಮ ಕಾರ್ಖಾನೆ ಕಾರ್ಯನಿರ್ವಹಿಸಲಿದೆ. ಜಿಲ್ಲಾಧಿಕಾರಿಗಳ ನಿರ್ದೇಶನ ಬಂದ ನಂತರವೇ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಯರಗಲ್ ಮದರಿಯ ಶ್ರೀ ಬಾಲಾಜಿ ಶುಗರ್ಸ್ ಆ್ಯಂಡ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಹಣಮಂತಗೌಡ ಪಾಟೀಲ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಯರಗಲ್ ಮದರಿಯಲ್ಲಿರುವ ಕಾರ್ಖಾನೆಯಲ್ಲಿ ಸೋಮವಾರ ಆಯೋಜಿಸಿದ್ದ ಬಾಯ್ಲರ್ ಪ್ರದೀಪನ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜ್ಯದಲ್ಲಿ ಕಬ್ಬಿನ ಎಂಎಸ್‌ಪಿ ದರ ಹೆಚ್ಚಳಕ್ಕೆ ಒತ್ತಾಯಿಸಿ ರೈತಪರ ಸಂಘಟನೆಗಳು ನಡೆಸುತ್ತಿರುವ ಹೋರಾಟ ನಮ್ಮ ಗಮನದಲ್ಲಿದೆ. ಕಬ್ಬಿನ ಬೆಲೆ ವಿಚಾರದಲ್ಲಿ ರೈತರ ಬೇಡಿಕೆಗಳು ಹಾಗೂ ಸಂಘಟನೆಗಳ ಹೋರಾಟದ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಕೇಂದ್ರ ಸರ್ಕಾರ ನೀಡುವ ಸೂಚನೆಗಳಿಗೆ ನಾವು ಬದ್ಧರಾಗಿರಬೇಕಾಗುತ್ತದೆ. ಸದ್ಯ ಶುಭ ಮುಹೂರ್ತದ ಹಿನ್ನೆಲೆಯಲ್ಲಿ ಬಾಯ್ಲರ್ ಪೂಜೆ ನೆರವೇರಿಸಲಾಗಿದೆಯೇ ಹೊರತು, ಕಬ್ಬು ನುರಿಸುವ ಕಾರ್ಯವನ್ನು ಆರಂಭಿಸಿಲ್ಲ ಎಂದು ತಿಳಿಸಿದರು.
ಕಬ್ಬಿನ ಬೆಲೆ ಹೆಚ್ಚಳದ ವಿಚಾರವಾಗಿ ರೈತ ಸಂಘಟನೆಗಳು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ಮುಂದಿನ ನಿರ್ದೇಶನ ಹಾಗೂ ರಾಜ್ಯದ ಸಕ್ಕರೆ ಕಾರ್ಖಾನೆಗಳ ಸಂಘದ ನಿರ್ಧಾರ ಮಹತ್ವ ಪಡೆದಿದೆ.
ಈ ಸಂದರ್ಭದಲ್ಲಿ ಕಾರ್ಖಾನೆಯ ನಿರ್ದೇಶಕರಾದ ಎಚ್.ಜಿ. ಪಾಟೀಲ್, ಡಾ. ಅಜಿತ್ ಕನಕರೆಡ್ಡಿ, ರಾಹುಲ್‌ಗೌಡ ಪಾಟೀಲ್, ಶ್ರೀನಿವಾಸ ಅರಕೇರಿ, ಅಧಿಕ್‌ಗೌಡ ಪಾಟೀಲ್, ಪ್ರಫುಲ್‌ಗೌಡ ಪಾಟೀಲ್, ಪ್ರಜ್ವಲ್‌ಗೌಡ ಎಚ್. ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಕೂಚಬಾಳ, ಸೋಮನಗೌಡ ಪಾಟೀಲ್ ನಡಹಳ್ಳಿ, ಶಿವಪ್ಪಗೌಡ ತಾತರೆಡ್ಡಿ, ಎಂ.ಬಿ. ನಾವದಗಿ, ಲಕ್ಷ್ಮಣ ಬಿಜ್ಜೂರ, ಕಾಮರಾಜ ಬಿರಾದಾರ, ಶಾಸಕರ ಆಪ್ತ ಸಹಾಯಕ ಮಲ್ಲಿಕಾರ್ಜುನ ಬಾಗೇವಾಡಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ ಹಾಗೂ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾರುತಿ ಗುರವ ಸೇರಿದಂತೆ ತಾಲ್ಲೂಕಿನ ಕಬ್ಬು ಬೆಳೆಗಾರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

