KRGRV
Thursday, October 15, 2026
Homeಬೆಂಗಳೂರುಮುನಿರತ್ನ ನಡವಳಿಕೆಗೆ ಬೇಸತ್ತು ಬಿಜೆಪಿ ತೊರೆದ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್

ಮುನಿರತ್ನ ನಡವಳಿಕೆಗೆ ಬೇಸತ್ತು ಬಿಜೆಪಿ ತೊರೆದ ಮಾಜಿ ಕಾರ್ಪೊರೇಟರ್ ಜಿ.ಕೆ. ವೆಂಕಟೇಶ್

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಾಜೀನಾಮೆ ಘೋಷಣೆ; ಪಕ್ಷದ ರಾಷ್ಟ್ರೀಯ ನಾಯಕರಿಗೂ ರಾಜೀನಾಮೆ ಪತ್ರದ ಪ್ರತಿ ರವಾನೆ

ಬೆಂಗಳೂರು: ರಾಜರಾಜೇಶ್ವರಿ ನಗರ (ಆರ್‌ಆರ್‌ ನಗರ) ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರ ನಡವಳಿಕೆ, ಕಾರ್ಯವೈಖರಿ ಹಾಗೂ ಹಲವು ಆರೋಪಗಳಿಂದ ಬೇಸತ್ತ ಯಶವಂತಪುರ 37ನೇ ವಾರ್ಡಿನ ಮಾಜಿ ಬಿಬಿಎಂಪಿ ಸದಸ್ಯ (ಕಾರ್ಪೊರೇಟರ್) ಜಿ.ಕೆ. ವೆಂಕಟೇಶ್ (ಎನ್.ಟಿ.ಆರ್) ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಜಿ.ಕೆ. ವೆಂಕಟೇಶ್ ಅವರು ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿ, ಶಾಸಕ ಮುನಿರತ್ನ ಅವರ ಕಾರ್ಯವೈಖರಿ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಜಿ.ಕೆ. ವೆಂಕಟೇಶ್ ಅವರು, ಅದರ ಪ್ರತಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೂ ರವಾನಿಸಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ವಿದ್ಯಾರ್ಥಿ ಜೀವನದಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಂ.ಕಾಮ್ ಹಾಗೂ ಎಂ.ಎ. (ಫಿಲಾಸಫಿ) ಪದವಿ ಪಡೆದಿದ್ದು, 2015-20ರ ಬಿಬಿಎಂಪಿ ಚುನಾವಣೆಯಲ್ಲಿ ಯಶವಂತಪುರ ವಾರ್ಡಿನಿಂದ ಅತಿ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದೆ. ಶಾಸಕ ಮುನಿರತ್ನ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಲು ಹಗಲಿರುಳು ಶ್ರಮಿಸಿದ್ದೇನೆ” ಎಂದು ಹೇಳಿದರು.

ಆದರೆ ಶಾಸಕ ಮುನಿರತ್ನ ಅವರ ಇತ್ತೀಚಿನ ನಡವಳಿಕೆ ಹಾಗೂ ಕಾರ್ಯವೈಖರಿಯಿಂದ ತೀವ್ರ ಅಸಮಾಧಾನಗೊಂಡಿದ್ದು, ಪಕ್ಷದ ಮೂಲ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಕ್ತ ಗೌರವ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಮೂಲ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಆರೋಪ

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾದ ನಂತರ ಶಾಸಕ ಮುನಿರತ್ನ ಅವರು ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸುವುದು, ಬೆದರಿಕೆ ಹಾಕುವುದು ಸೇರಿದಂತೆ ಹಲವು ಘಟನೆಗಳಿಂದ ಕಾರ್ಯಕರ್ತರು ಬೇಸತ್ತಿದ್ದಾರೆ ಎಂದು ಜಿ.ಕೆ. ವೆಂಕಟೇಶ್ ಆರೋಪಿಸಿದರು.

ಈ ಕಾರಣದಿಂದ ಆಶಾ ಸುರೇಶ್, ವೇಲು ನಾಯ್ಕರ್, ಶ್ರೀನಿವಾಸಮೂರ್ತಿ (ಚಾನಿ), ಮೋಹನ್ ಕುಮಾರ್, ಸಿದ್ದೇಗೌಡ, ಮಂಜುಳಾ ನಾರಾಯಣಸ್ವಾಮಿ ಸೇರಿದಂತೆ ಹಲವು ಮಾಜಿ ಕಾರ್ಪೊರೇಟರ್‌ಗಳು ಮತ್ತು ಮುಖಂಡರು ಬಿಜೆಪಿ ತೊರೆದಿದ್ದಾರೆ ಎಂದು ಹೇಳಿದರು.

ಅನುದಾನ ದುರುಪಯೋಗ ಹಾಗೂ ಕಳಪೆ ಕಾಮಗಾರಿ ಆರೋಪ

ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳ ಕುರಿತು ಆರೋಪಿಸಿದ ಅವರು, ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಇಲ್ಲ ಎಂದು ದೂರಿದರು.

50-60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೆರಿಗೆ ಆಸ್ಪತ್ರೆಯನ್ನು ಕೆಡವಿ ಜನರಲ್ ಆಸ್ಪತ್ರೆ ನಿರ್ಮಿಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಬಳಕೆ ಮಾಡಲಾಗಿದೆ. ಆದರೆ ಇಂದಿಗೂ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎಂದು ಆರೋಪಿಸಿದರು.

ಬಿ.ಕೆ. ನಗರದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರ ಪಡೆದ ಬಡವರ ಮನೆಗಳನ್ನು ಬಹುಮಹಡಿ ಕಟ್ಟಡ ನಿರ್ಮಿಸುವ ಭರವಸೆ ನೀಡಿ ಕೆಡವಲಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.

ಹಳೆಯ ಕನ್ನಡ ಸರ್ಕಾರಿ ಶಾಲೆಯನ್ನು ಕೆಡವಿ ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಕನ್ನಡ ಶಾಲೆ ಹಾಗೂ ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದರು.

ಜಿ.ಪಿ. ಪಾರ್ಕ್‌ನಲ್ಲಿದ್ದ ಅಂತರರಾಷ್ಟ್ರೀಯ ಮಟ್ಟದ ಈಜುಕೊಳವನ್ನು ನವೀಕರಣದ ಹೆಸರಿನಲ್ಲಿ ಹಾಳು ಮಾಡಲಾಗಿದೆ ಎಂದು ದೂರಿದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ

ಯಶವಂತಪುರದಲ್ಲಿರುವ ಸುಮಾರು 200 ವರ್ಷಗಳ ಹಳೆಯ ಶಿವ ಹಾಗೂ ಶನಿದೇವರ ದೇವಸ್ಥಾನ ತೆರವುಗೊಳಿಸುವ ಸಂಬಂಧ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಸಾರ್ವಜನಿಕರ ಹೋರಾಟದಿಂದ ದೇವಸ್ಥಾನ ಉಳಿಯಿತು ಎಂದು ಜಿ.ಕೆ. ವೆಂಕಟೇಶ್ ಹೇಳಿದರು.

ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಚಾರದಲ್ಲೂ ಅಸಭ್ಯ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.

ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ

ಶಾಸಕ ಮುನಿರತ್ನ ಅವರ ವಿರುದ್ಧದ ಹಲವು ಆರೋಪಗಳು, ಪ್ರಕರಣಗಳು ಹಾಗೂ ಜೈಲು ವಾಸದ ನಂತರವೂ ಅವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿಲ್ಲ. ಈ ವಿಚಾರಗಳನ್ನು ಬಿಜೆಪಿ ಹಿರಿಯ ನಾಯಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿ.ಕೆ. ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.

“ಮುನಿರತ್ನ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಿ, ಆರ್‌ಆರ್‌ ನಗರ ಕ್ಷೇತ್ರಕ್ಕೆ ಬೇರೆ ನಾಯಕತ್ವ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ತೊರೆಯುವ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಎಚ್ಚರಿಸಿದರು.

ಮುನಿರತ್ನ ಅವರೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಲಿದೆ ಎಂದು ಅವರು ಹೇಳಿದರು.

ಹೆಚ್ಚಿನ ಸುದ್ದಿ