ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಭೆ; ಮತಾಧಿಕಾರ ರಕ್ಷಣೆ, SIR ವಿರುದ್ಧದ ಹೋರಾಟ ಹಾಗೂ ಮೈತ್ರಿಕೂಟದ ಬಲವರ್ಧನೆ ಕುರಿತು ಚರ್ಚೆ
ಬೆಂಗಳೂರು, ಅ. 15: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ನಾಗರಿಕರ ಮತದಾನದ ಹಕ್ಕಿನ ರಕ್ಷಣೆಗಾಗಿ ಸಂಘಟಿತ ಹೋರಾಟ ರೂಪಿಸುವ ಉದ್ದೇಶದಿಂದ ಇಂಡಿಯಾ ಮೈತ್ರಿಕೂಟದ ರಾಜ್ಯಮಟ್ಟದ ಮಹತ್ವದ ಸಭೆಯು ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ನಡೆಯಲಿದೆ.
‘ಮತ ಉಳಿಸಿ – ದೇಶ ಉಳಿಸಿ’ ಘೋಷವಾಕ್ಯದಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮೈತ್ರಿಕೂಟದ CPI(M)
CPI, CPI(M-L)-L, AIFB, SP ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸುತ್ತ ಉದ್ಭವಿಸಿರುವ ವಿವಾದಗಳು, ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಆರೋಪಗಳು ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ವ್ಯಕ್ತವಾಗಿರುವ ಆತಂಕಗಳು ಸಭೆಯ ಪ್ರಮುಖ ಚರ್ಚಾ ವಿಷಯಗಳಾಗಲಿವೆ.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಾಧಾರ. ಅರ್ಹ ನಾಗರಿಕರ ಮತಾಧಿಕಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಮೂಲಭೂತ ಹೊಣೆಗಾರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಹಕ್ಕುಗಳ ರಕ್ಷಣೆಗಾಗಿ ರಾಜಕೀಯ ಮತ್ತು ಕಾನೂನಾತ್ಮಕ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ರಾಜ್ಯದಲ್ಲಿ ಜಂಟಿ ಹೋರಾಟಕ್ಕೆ ಒತ್ತು: ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾಯತ್ತತೆ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೈತ್ರಿಕೂಟದ ಪಕ್ಷಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಗುವುದು. ರಾಜ್ಯ, ಜಿಲ್ಲೆ ಹಾಗೂ ತಳಮಟ್ಟದಲ್ಲಿ ಮೈತ್ರಿಕೂಟದ ಸಮನ್ವಯವನ್ನು ಬಲಪಡಿಸುವುದು, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಮುಂದಿನ ಹಂತದ ಜಂಟಿ ಹೋರಾಟಗಳಿಗೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವುದು ಸಭೆಯ ಉದ್ದೇಶವಾಗಿದೆ.
‘ಮತದಾನದ ಹಕ್ಕಿನ ರಕ್ಷಣೆ ಯಾವುದೇ ಒಂದು ರಾಜಕೀಯ ಪಕ್ಷದ ಹಿತಾಸಕ್ತಿಗೆ ಸೀಮಿತವಾದ ಪ್ರಶ್ನೆಯಲ್ಲ. ಅದು ದೇಶದ ಪ್ರತಿಯೊಬ್ಬ ನಾಗರಿಕನ ಪ್ರಜಾಸತ್ತಾತ್ಮಕ ಹಕ್ಕು ಹಾಗೂ ಸಂವಿಧಾನದ ಆಶಯಗಳನ್ನು ಉಳಿಸುವ ಜವಾಬ್ದಾರಿಯಾಗಿದೆ’ ಎಂಬ ನಿಲುವಿನೊಂದಿಗೆ ಇಂಡಿಯಾ ಮೈತ್ರಿಕೂಟವು ರಾಜ್ಯದಲ್ಲಿ ಒಗ್ಗಟ್ಟಿನ ಹೋರಾಟವನ್ನು ಮುಂದುವರಿಸಲು ಉದ್ದೇಶಿಸಿದೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಪ್ರಜಾಪ್ರಭುತ್ವದ ರಕ್ಷಣೆಗೆ ಸಮಾನ ಮನಸ್ಕ ಶಕ್ತಿಗಳನ್ನು ಒಗ್ಗೂಡಿಸುವ ಹಾಗೂ ಮುಂದಿನ ಹೋರಾಟಕ್ಕೆ ದಿಕ್ಕು ನೀಡುವ ದೃಷ್ಟಿಯಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ.
ಸಭೆಯ ವಿವರ:
ಅಕ್ಟೋಬರ್ 16, ಗುರುವಾರ,
ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಶಾಸಕರ ಭವನ.

