ಅಥಣಿ: ಹೆತ್ತ ತಾಯಿ ಮತ್ತು ತಾಯ್ನಾಡಿನ ಋಣ ಸ್ವರ್ಗಕ್ಕಿಂತಲೂ ಮಿಗಿಲಾದದ್ದು. ಪ್ರತಿಯೊಬ್ಬರೂ ಜೀವನದಲ್ಲಿ ಹೆತ್ತ ತಂದೆ-ತಾಯಿಯ ಋಣ, ತಾಯ್ನಾಡಿನ ಋಣ ಹಾಗೂ ಅಕ್ಷರ ಕಲಿಸಿದ ಗುರುಗಳ ಋಣವನ್ನು ಎಂದಿಗೂ ಮರೆಯಬಾರದು ಎಂದು ಸಹಕಾರ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ನಾಗನೂರು ಪಿ.ಕೆ. ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ನೀಡಿದ ಗುರುಗಳ ಆಶೀರ್ವಾದದಿಂದಲೇ ಇಂದು ನಾವು ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಾಧ್ಯವಾಗಿದೆ. ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಶ್ರೀರಾಮಚಂದ್ರನು ಲಕ್ಷ್ಮಣನಿಗೆ ತಾಯಿ ಮತ್ತು ತಾಯ್ನಾಡಿನ ಮಹತ್ವವನ್ನು ತಿಳಿಸುವ ಸಂದರ್ಭದಲ್ಲಿ, ಹೆತ್ತ ತಾಯಿ ಹಾಗೂ ನಮ್ಮನ್ನು ಹೊತ್ತ ಮಣ್ಣಿನ ಋಣ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಸಂದೇಶ ನೀಡಿದ್ದಾನೆ. ಈ ಮಾತು ಪ್ರತಿಯೊಬ್ಬರ ಜೀವನಕ್ಕೂ ಆದರ್ಶವಾಗಬೇಕು ಎಂದು ಹೇಳಿದರು.
ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪರಮಪೂಜ್ಯ ಗವಿಮಠದ ಶ್ರೀಗಳು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಗಮನ ವಿಶೇಷವಾಗಿದೆ. ಗವಿಮಠದ ಶ್ರೀಗಳ ದರ್ಶನ ಪಡೆಯುವುದೇ ಪೂರ್ವಜನ್ಮದ ಪುಣ್ಯ. ಉತ್ತರ ಕರ್ನಾಟಕದ ಸಾವಿರಾರು ಬಡ ಮಕ್ಕಳಿಗೆ ಅಕ್ಷರ ಜ್ಞಾನ, ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಗವಿಮಠವು ಶ್ರೇಷ್ಠ ಸೇವೆ ಸಲ್ಲಿಸುತ್ತಿದೆ. ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದಾಗ ಅಲ್ಲಿನ ಸೇವಾ ಕಾರ್ಯಗಳ ಮಹತ್ವ ಅರಿವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ತಾವು 2004ರಲ್ಲಿ ಮೊದಲ ಬಾರಿಗೆ ಶಾಸಕರಾದಾಗಿನಿಂದ ಹತ್ತಿರದಿಂದ ನೋಡಿದ್ದೇನೆ. ರೈತರಿಗೆ 10 ಎಚ್ಪಿ ಸಾಮರ್ಥ್ಯದವರೆಗೆ ಉಚಿತ ವಿದ್ಯುತ್ ನೀಡಿದ ಅವರ ಕೊಡುಗೆಯನ್ನು ರಾಜ್ಯದ ರೈತರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಧೀಮಂತ ನಾಯಕನ ಪುತ್ರರಾಗಿರುವ ಮಧು ಬಂಗಾರಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದ್ದಾರೆ ಎಂದು ಹೇಳಿದರು.
ಮಧು ಬಂಗಾರಪ್ಪ ಅವರು ಶಿಕ್ಷಣ ಸಚಿವರಾಗಿರದಿದ್ದರೆ ಅಥಣಿ ಕ್ಷೇತ್ರಕ್ಕೆ 12 ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳನ್ನು ತರುವುದು ಸಾಧ್ಯವಾಗುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಅಥಣಿ ಪಟ್ಟಣದಲ್ಲಿ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವ ಕುರಿತು ವಿಧಾನಸಭೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೆ. ಅನುದಾನಿತ ಶಾಲೆಗಳು ಇರುವುದರಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಆರಂಭಿಸಲು ಸಾಧ್ಯವಿಲ್ಲ ಎಂಬ ನಿಯಮವನ್ನು ಅಧಿಕಾರಿಗಳು ಮುಂದಿಡುತ್ತಿದ್ದರು ಎಂದು ಸವದಿ ಅವರು ತಿಳಿಸಿದರು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೆ. ಆಗ ಅವರು, ಇನ್ನು ಮುಂದೆ ಈ ವಿಷಯದಲ್ಲಿ ನೀವು ಮುಜುಗರ ಅನುಭವಿಸುವ ಅಗತ್ಯವಿಲ್ಲ ಎಂದು ಭರವಸೆ ನೀಡಿ, ಒಂದರ ಬದಲು ಎರಡು ಸರ್ಕಾರಿ ಪ್ರೌಢಶಾಲೆಗಳನ್ನು ಏಕಕಾಲದಲ್ಲಿ ಮಂಜೂರು ಮಾಡಿದರು. ಈ ವಿಷಯವನ್ನು ವಿಧಾನಸಭೆಯಲ್ಲಿಯೂ ಪ್ರಸ್ತಾಪಿಸಿದ್ದೇನೆ ಎಂದು ಸವದಿ ಹೇಳಿದರು.
ಗ್ರಾಮೀಣ ಭಾಗದ ಶಾಸಕರಿಗೆ ಶಿಕ್ಷಣದ ಸಮಸ್ಯೆಗಳ ತೀವ್ರತೆ ಚೆನ್ನಾಗಿ ಅರ್ಥವಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಧು ಬಂಗಾರಪ್ಪ ಅವರು ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಅವರ ಸಂಕಲ್ಪಕ್ಕೆ ಪರಮಪೂಜ್ಯರ ಆಶೀರ್ವಾದ ದೊರೆಯಲಿ ಎಂದು ಹಾರೈಸಿದರು.

