KRGRV
Sunday, October 18, 2026
Homeರಾಜಕೀಯ1000 ಗ್ರಾಮೀಣ ಬಸ್ ತಂಗುದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಸಿದ್ಧತೆ; 15 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲು...

1000 ಗ್ರಾಮೀಣ ಬಸ್ ತಂಗುದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಸಿದ್ಧತೆ; 15 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು, ಅಕ್ಟೋಬರ್ 18: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ಗ್ರಾಮೀಣ ಬಸ್ ತಂಗುದಾಣಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಸಂಬಂಧಿತ ಅಧಿಕಾರಿಗಳಿಗೆ 15 ದಿನಗಳೊಳಗೆ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿಬಿಜಿ ರಾಮ್ ಜಿ ಅಡಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ಸಂಬಂಧಿತ ಇಲಾಖೆಯ ಕಾರ್ಯದರ್ಶಿ ಹಾಗೂ ವಿಬಿಜಿ ರಾಮ್ ಜಿ ಆಯುಕ್ತರಿಗೆ ಸಚಿವರು ಲಿಖಿತ ಸೂಚನೆ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟವಿರುವ 1000 ಗ್ರಾಮಗಳನ್ನು ಗುರುತಿಸಿ, ಗ್ರಾಮೀಣ ಸೊಗಡು ಮತ್ತು ಸ್ಥಳೀಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಪ್ರತಿಬಿಂಬಿಸುವ ಮಾದರಿಯ ಬಸ್ ತಂಗುದಾಣಗಳ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಜೊತೆಗೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿ ವೆಚ್ಚ ಹಾಗೂ ಕೂಲಿ ವೆಚ್ಚದ ಅಂದಾಜು ಸಿದ್ಧಪಡಿಸಿ 15 ದಿನಗಳೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆದೇಶಿಸಲಾಗಿದೆ.

ಪ್ರಸ್ತುತ ರಾಜ್ಯದ 5,927 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಸೇವೆ ಲಭ್ಯವಿದ್ದರೂ, ಬಸ್ ನಿಲುಗಡೆ ಸ್ಥಳಗಳಲ್ಲಿ ಸಮರ್ಪಕ ತಂಗುದಾಣಗಳ ಕೊರತೆಯಿದೆ. ಇದರಿಂದ ಸಾರ್ವಜನಿಕರು ಬಿಸಿಲು ಹಾಗೂ ಮಳೆಯಲ್ಲೇ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿನ ಹಳೆಯ ಬಸ್ ತಂಗುದಾಣಗಳು ಶಿಥಿಲಗೊಂಡು ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ವಿಬಿಜಿ ರಾಮ್ ಜಿ ಯೋಜನೆಯಡಿ ಹೊಸ ಬಸ್ ತಂಗುದಾಣಗಳ ನಿರ್ಮಾಣದ ಜೊತೆಗೆ ಹಳೆಯ ತಂಗುದಾಣಗಳ ದುರಸ್ತಿ ಮತ್ತು ನಿರ್ವಹಣೆಯೂ ಕೈಗೊಳ್ಳಲು ಅವಕಾಶವಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಅಕುಶಲ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ