KRGRV
Sunday, October 18, 2026
Homeಬೆಂಗಳೂರುನಾಗರಿಕ ಸೇವೆಗಳನ್ನು ಸುಲಭ ಹಾಗೂ ಪಾರದರ್ಶಕಗೊಳಿಸಲು ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ.

ನಾಗರಿಕ ಸೇವೆಗಳನ್ನು ಸುಲಭ ಹಾಗೂ ಪಾರದರ್ಶಕಗೊಳಿಸಲು ರಾಜ್ಯ ಸರ್ಕಾರದಿಂದ ದಿಟ್ಟ ಹೆಜ್ಜೆ.

​ಬೆಂಗಳೂರು, ಅಕ್ಟೋಬರ್ 18 : ರಾಜ್ಯದಲ್ಲಿ ನಾಗರಿಕರಿಗೆ ತೊಂದರೆಯಿಲ್ಲದೆ, ಸಕಾಲದಲ್ಲಿ ಹಾಗೂ ಪಾರದರ್ಶಕವಾಗಿ ಸರ್ಕಾರಿ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಎಲ್ಲಾ ಇಲಾಖೆಗಳಿಗೆ ಅನ್ವಯವಾಗುವಂತೆ ಹೊಸ ಪ್ರಮಾಣಿತ ಮಾರ್ಗದರ್ಶಿ ಸೂತ್ರಗಳನ್ನು (Standard Features) ಬಿಡುಗಡೆಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

​ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ (ಕೆಎಆರ್‌ಸಿ-2) ಶಿಫಾರಸುಗಳ ಆಧಾರದ ಮೇಲೆ, ಪ್ರಜಾ ಸೇವಾ ಇಲಾಖೆಯು ಈ ಸಮಗ್ರ ನಿಯಮಾವಳಿಗಳನ್ನು ಸಿದ್ಧಪಡಿಸಿದ್ದು, ಮಾನ್ಯ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ.

ಹೊಸ ಆದೇಶದ ಪ್ರಮುಖ ಮುಖ್ಯಾಂಶಗಳು:
​
ಎಲ್ಲಾ ಸೇವೆಗಳು ಆನ್‌ಲೈನ್ ಮತ್ತು ಸಕಾಲ ವ್ಯಾಪ್ತಿಗೆ:

​ಸರ್ಕಾರದ ಪರವಾನಗಿ, ಪ್ರಮಾಣಪತ್ರ ಸೇರಿದಂತೆ ಎಲ್ಲಾ ನಾಗರಿಕ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ವ್ಯವಸ್ಥೆಗೆ ತರಲಾಗುವುದು ಹಾಗೂ ‘ಸಕಾಲ’ ವ್ಯಾಪ್ತಿಗೆ ಅಳವಡಿಸಲಾಗುವುದು.
​ಸೇವೆಗಳ ಕಾಲಮಿತಿಯನ್ನು ಕಡಿತಗೊಳಿಸಲಾಗುತ್ತಿದ್ದು, ಸಾಧ್ಯವಿರುವೆಡೆಯಲ್ಲಿ ಕೌಂಟರ್‌ನಲ್ಲೇ ತಕ್ಷಣವೇ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು.

ಆನ್‌ಲೈನ್ ಸೇವೆಗಳಲ್ಲಿ ಪ್ರಮುಖ ಸುಧಾರಣೆಗಳು:

ಆಧಾರ್ ಹಾಗೂ ಡಿಜಿಲಾಕರ್ ಬೆಂಬಲ: ಆನ್‌ಲೈನ್ ಸೇವೆಗಳಿಗೆ ಆಧಾರ್/ಮೊಬೈಲ್ ಆಧಾರಿತ ಪರಿಶೀಲನೆ ಬಳಸಲಾಗುವುದು. ವಿತರಿಸಲಾಗುವ ಎಲ್ಲಾ ಪ್ರಮಾಣಪತ್ರಗಳನ್ನು ‘ಡಿಜಿಲಾಕರ್’ನಲ್ಲಿ ಸಂಗ್ರಹಿಸಲಾಗುತ್ತದೆ.

​ಆಟೋ-ರಿಫಂಡ್ ಹಾಗೂ ಯುಪಿಐ ಪಾವತಿ: ಅರ್ಜಿ ನಿರಾಕರಣೆಯಾದರೆ (Rejection) ಪಾವತಿಸಿದ ಶುಲ್ಕವನ್ನು ಆಟೋಮ್ಯಾಟಿಕ್ ಆಗಿ ಮರುಪಾವತಿಸಲಾಗುವುದು. ಯುಪಿಐ (UPI) ಸೇರಿದಂತೆ ಡಿಜಿಟಲ್ ಪಾವತಿಗೆ ಆದ್ಯತೆ ನೀಡಿ, ಭೌತಿಕ ಹಣ ಸಂಗ್ರಹಣೆ ತಪ್ಪಿಸಲಾಗುತ್ತದೆ.

ಕನ್ನಡ ಭಾಷೆಗೆ ಆದ್ಯತೆ: ಪ್ರಸ್ತುತ ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುವ ಎಲ್ಲಾ ನಮೂನೆ ಮತ್ತು ಅರ್ಜಿ ನಮೂನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೂ ಲಭ್ಯಗೊಳಿಸಲಾಗುವುದು.

ಎಸ್‌ಎಂಎಸ್ & ವಾಟ್ಸ್‌ಆ್ಯಪ್ ಮುಖಾಂತರ ಅಪ್‌ಡೇಟ್: ಅರ್ಜಿಯ ಪ್ರಸ್ತುತ ಸ್ಥಿತಿಗತಿಯನ್ನು (Status) ಕಾಲಕಾಲಕ್ಕೆ ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ನಾಗರಿಕರಿಗೆ ತಲುಪಿಸಲಾಗುವುದು.

ಸರ್ಕಾರಿ ಕಚೇರಿಗಳಲ್ಲಿ ಮೂಲಸೌಕರ್ಯ ಹಾಗೂ ಪಾರದರ್ಶಕತೆ:

​ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಕಡ್ಡಾಯ.

​ಅಧಿಕಾರಿಗಳನ್ನು ಭೇಟಿಯಾಗಲು ಟೋಕನ್ ವ್ಯವಸ್ಥೆ ಹಾಗೂ ವಿಚಾರಣೆಗೆ ಹಾಜರಾಗಬೇಕಿದ್ದಲ್ಲಿ ಮುಂಚಿತವಾಗಿಯೇ ಸಮಯ ನಿಗದಿಪಡಿಸುವ (Time Slot) ಸೌಲಭ್ಯ ನೀಡಲಾಗುತ್ತದೆ.

​ಸ್ಥಳ ತಪಾಸಣೆಗಳನ್ನು (Inspections) ಮೊಬೈಲ್ ಆ್ಯಪ್ ಮೂಲಕವೇ ಪಾರದರ್ಶಕವಾಗಿ ನಡೆಸಲು ನಿರ್ದೇಶಿಸಲಾಗಿದೆ.

​ಸರ್ಕಾರದ ಈ ನೂತನ ಆದೇಶದಿಂದಾಗಿ ಸಾರ್ವಜನಿಕರು ಲಂಚಗುಳಿತನ, ಕಚೇರಿಗಳಿಗೆ ಅಲೆಯುವುದು ಹಾಗೂ ವಿಳಂಬ ನೀತಿಯಿಂದ ಮುಕ್ತಿ ಪಡೆಯಲಿದ್ದು, ಇಲಾಖೆಗಳು ತಮ್ಮ ಅನುಪಾಲನಾ ವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ