KRGRV
Saturday, October 24, 2026
Homeಜಿಲ್ಲಾ ಸುದ್ದಿಗಳುಶ್ರೀ ಕ್ಷೇತ್ರ ಸಿಗಂದೂರಿನ ರಂಗಶಿಕ್ಷಣ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶ್ರೀ ಕ್ಷೇತ್ರ ಸಿಗಂದೂರಿನ ರಂಗಶಿಕ್ಷಣ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿವಮೊಗ್ಗ: ಸರ್ಕಾರಿ ಶಾಲಾ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಕಲಾಭಿರುಚಿ ಬೆಳೆಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಸಿಗಂದೂರು ಹಮ್ಮಿಕೊಂಡಿರುವ ‘ಚಿತ್ತ ರಂಗಶಿಕ್ಷಣದತ್ತ’ ವಿನೂತನ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್-2026 ಗೌರವ ಲಭಿಸಿದೆ.

ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿ ಡಾ. ರಾಮಪ್ಪ ಅವರ ಕನಸಿನ ಯೋಜನೆಯಾದ ಈ ಕಾರ್ಯಕ್ರಮವನ್ನು ಶ್ರೀ ಸಿಗಂದೂರು ಚೌಡಮ್ಮ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅನುಷ್ಠಾನಗೊಳಿಸಿದೆ. ರಂಗಭೂಮಿಯ ಮೂಲಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಯೋಜನೆಯಡಿ 10 ಸರ್ಕಾರಿ ಶಾಲೆಗಳ 226 ವಿದ್ಯಾರ್ಥಿಗಳಿಗೆ 90 ದಿನಗಳ ಕಾಲ ರಂಗಭೂಮಿ ತರಬೇತಿ ನೀಡಲಾಗಿದೆ. ದಸರಾ ಹಿನ್ನೆಲೆಯಲ್ಲಿ ಸತತ 10 ದಿನಗಳ ಕಾಲ ನಡೆದ ನಾಟಕ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಾವು ಕಲಿತ ರಂಗಕಲೆಯನ್ನು ಪ್ರದರ್ಶಿಸಿದ್ದಾರೆ. ಪ್ರತಿ ಶಾಲೆಯಿಂದ ಒಂದೊಂದು ನೆಲದ ನಾಟಕವನ್ನು ಪ್ರಸ್ತುತಪಡಿಸಲಾಗಿದೆ.

ಸಜಿ ಆರ್. ತುಮರಿ ಅವರ ನಿರ್ದೇಶನದಲ್ಲಿ ಹಾಗೂ ಮಹೇಶ್ ಚನ್ನಗಿರಿ ಅವರ ಸಹ ನಿರ್ದೇಶನದಲ್ಲಿ ನಾಟಕಗಳು ಪ್ರದರ್ಶನಗೊಂಡಿವೆ. ರಂಗಶಿಕ್ಷಣದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ನಾಯಕತ್ವ ಗುಣ, ಭಾಷಾ ಜ್ಞಾನ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ, ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.

ಯೋಜನೆಯ ಯಶಸ್ಸಿಗೆ ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಅವರು ಸಹಕಾರ ನೀಡಿದ್ದಾರೆ. ಶಿಕ್ಷಣ ಮತ್ತು ಕಲೆಯ ಮೂಲಕ ಸರ್ಕಾರಿ ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಕಾಶ ಕಲ್ಪಿಸಿರುವ ಈ ಪ್ರಯತ್ನಕ್ಕೆ ಶಿಕ್ಷಣ ವಲಯ ಹಾಗೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಕ್ಕಳ ಪ್ರತಿಭೆಗೆ ರಂಗಭೂಮಿಯ ಮೂಲಕ ಪ್ರೋತ್ಸಾಹ ನೀಡುತ್ತಿರುವ ಶ್ರೀ ಕ್ಷೇತ್ರ ಸಿಗಂದೂರಿನ ಈ ವಿನೂತನ ಕಾರ್ಯಕ್ರಮಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್-2026 ಗೌರವ ಸಂದಿರುವುದು ಯೋಜನೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ಹೆಚ್ಚಿನ ಸುದ್ದಿ