KRGRV
Tuesday, November 3, 2026
Homeರಾಜ್ಯಕನ್ನಡ ರಾಜ್ಯೋತ್ಸವಕ್ಕೆ 'hmt ಕನ್ನಡಿಗ' ನೂತನ ಕೈ ಗಡಿಯಾರಗಳನ್ನು ರಾಜ್ಯಕ್ಕೆ ಸಮರ್ಪಿಸಿದ ಹೆಚ್.ಡಿ.ಕುಮಾರಸ್ವಾಮಿ

ಕನ್ನಡ ರಾಜ್ಯೋತ್ಸವಕ್ಕೆ ‘hmt ಕನ್ನಡಿಗ’ ನೂತನ ಕೈ ಗಡಿಯಾರಗಳನ್ನು ರಾಜ್ಯಕ್ಕೆ ಸಮರ್ಪಿಸಿದ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಿಗರಿಗೆ ವಿಶೇಷ ಕಾಣಿಕೆ ಕೊಟ್ಟ hmt

hmt ಪುನಶ್ಚೇತನಕ್ಕೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದ ಹೆಚ್ಡಿಕೆ

ಹೆಚ್ಎಂಟಿ ವೈಭವದ ದಿನಗಳನ್ನು ಸ್ಮರಿಸಿ ಭಾವೋದ್ವೇಗಕ್ಕೆ ಒಳಗಾದ ಕೇಂದ್ರ ಸಚಿವರು

ನವದೆಹಲಿ 1 ನವೆಂಬರ್ 2026

ಕನ್ನಡ ರಾಜ್ಯೋತ್ಸವದ ನಿಮಿತ್ತ ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್ಎಂಟಿ ಕಂಪನಿ ತಯಾರಿಸಿರುವ ‘hmt ಕನ್ನಡಿಗ’ ಎನ್ನುವ ನೂತನ ಸರಣಿಯ ವಿಶಿಷ್ಟವಾದ ಕೈ ಗಡಿಯಾರಗಳನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿಗೆ ಸಮರ್ಪಿಸಿದರು.

ಚೈನ್ ಮತ್ತು ಬೆಲ್ಟ್ (ಸ್ಟ್ರಾಪ್) ನಮೂನೆಯ ನಾಲ್ಕು ನೂತನ ಕೈಗಡಿಯಾರಗಳನ್ನು ಕನ್ನಡನಾಡಿಗೆ ಸಮರ್ಪಣೆ ಮಾಡಿದ ಕೇಂದ್ರ ಸಚಿವರು; ನನ್ನ ಬದುಕಿನಲ್ಲಿ ಇದೊಂದು ಆವಿಸ್ಮರಣೀಯ ಕ್ಷಣ ಎಂದು ಭಾವೋದ್ವೇಗಕ್ಕೆ ಒಳಗಾದರು.

ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದು ಪ್ರಖ್ಯಾತಿಯಾಗಿದ್ದ ಎಚ್ಎಂಟಿ ಕೈಗಡಿಯಾರಗಳು ಕರ್ನಾಟಕದ ಅಸ್ಮಿತೆ ಆಗಿದ್ದವು. ಬೆಂಗಳೂರಿನಲ್ಲಿ ತಯಾರಾಗುತ್ತಿದ್ದ ಈ ವಾಚ್ ಗಳನ್ನು ನಮ್ಮ ನಾಡಿನ ನಾವಿನ್ಯತೆ ಮತ್ತು ಕೌಶಲ್ಯತೆಗೆ ಕಳಸಪ್ರಾಯವಾಗಿವು. ಮತ್ತೆ ಅಂತಹ ವೈಭವದ ದಿನಗಳನ್ನು ಮರಳಿ ತರುವುದಕ್ಕೆ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಘೋಷಿಸಿದರು.

ಈ ಗಡಿಯಾರಗಳು ಈಗ ವಿದ್ಯುಕ್ತವಾಗಿ ಅನಾವರಣಗೊಂಡಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ದೊರೆಯಲಿವೆ. ಮುಖ್ಯವಾಗಿ ಎಚ್ಎಂಟಿ ಮಳಿಗೆಗಳಲ್ಲಿ ಮಾರಾಟಕ್ಕೆ ದೊರೆಯಲಿವೆ. ಹೆಚ್ಎಂಟಿ ಬ್ರಾಂಡಿನ ಕೈ ಗಡಿಯಾರಗಳನ್ನು ಕಟ್ಟುವುದಕ್ಕೆ ವಯಸ್ಸಿನ ಹಂಗಿಲ್ಲ. ಎಲ್ಲಾ ವಯೋಮಾನದ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಯುವಜನರಿಗೆ ಬಹಳವಾಗಿ ಇಷ್ಟವಾಗುವ ಹಾಗೂ ಸರಿಹೊಂದುವ ನಮೂನೆಯಲ್ಲಿ ಇವು ತಯಾರಾಗಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ಉತ್ಕೃಷ್ಟ ಗುಣಮಟ್ಟದ, ಅತ್ಯಧುನಿಕ ತಂತ್ರಜ್ಞಾನದ ಹಾಗೂ ರೇಡಿಯಂ ಹೊಳಪನ್ನು ಹೊಂದಿರುವ ಇವುಗಳ ಬೆಲೆ ಬೆಲೆ ₹3,500 ರಿಂದ ₹3,600 ಇರುತ್ತದೆ. ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್‌ಗಳನ್ನು ಅಳವಡಿಸಲಾಗಿದೆ. ಒಂದು ಬೆಲ್ಟಿನ ಬೆಲೆಯೇ ₹450 ಇದೆ ಎಂದು ಸಚಿವರು ಹೇಳಿದರು.

ಕನ್ನಡ ಹೋರಾಟಗಾರರ ಉಪಸ್ಥಿತಿ ಸಂತೋಷ ತಂದಿದೆ:

ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಗೆ ಸಾಕ್ಷಿಪ್ರಜ್ಞೆಯಂತೆ ಕಂಗೊಳಿಸುವ ಹೆಚ್ಎಂಟಿ ನೂತನ ಸರಣಿಯ hmt ಕನ್ನಡಿಗ ಕೈಗಡಿಯಾರಗಳ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿದ್ದೆ. ನನ್ನ ಆಹ್ವಾನಕ್ಕೆ ಒಪ್ಪಿ ಇಲ್ಲಿಗೆ ಬಂದಿರುವ ಎಲ್ಲಾ ಕನ್ನಡ ಹೋರಾಟದ ಕಟ್ಟಾಳುಗಳನ್ನು ಕಂಡು ನನಗೆ ಬಹಳ ಸಂತೋಷವಾಗಿದೆ ಎಂದು ಸಚಿವರು ಹೇಳಿದರು.

ಇದೊಂದು ಅಪರೂಪದ ಕಾರ್ಯಕ್ರಮ. ಕರ್ನಾಟಕ ರಾಜ್ಯೋತ್ಸವ ಮತ್ತು ಹೆಚ್ಎಂಟಿ ಕೈಗಡಿಯಾರಗಳ ಬಿಡುಗಡೆ ಒಂದೇ ಸಂದರ್ಭದಲ್ಲಿ ನಡೆಯುತ್ತಿರುವುದು ಅತ್ಯಂತ ಅವಿಸ್ಮರಣೀಯ ಸಂಗತಿ ಎಂದು ಬಣ್ಣಿಸಿದ ಸಚಿವರು; ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒತ್ತಾಸೆ ಕಾರಣದಿಂದ ಹೆಚ್ಎಂಟಿ ಕಾರ್ಖಾನೆ, ಬೆಂಗಳೂರಿನಲ್ಲಿ ಸ್ಥಾಪನೆ ಆಯಿತು. ಅದನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

1953 ರಲ್ಲಿ ಸ್ಥಾಪನೆಯಾದ ಈ ಕಾರ್ಖಾನೆ ಲಕ್ಷಾಂತರ ಕುಟುಂಬಗಳಿಗೆ ಜೀವನಧಾರವಾಗಿತ್ತು. ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೇವಲ ಗಡಿಯಾರಗಳನ್ನು ಅಷ್ಟೇ ಅಲ್ಲದೆ ಟ್ರ್ಯಾಕ್ಟರ್ ಗಳು, ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ಯಂತ್ರೋಪಕರಣಗಳನ್ನು ಈ ಕಾರ್ಖಾನೆ, ತಯಾರು ಮಾಡುತ್ತಾ ಬಂದಿತ್ತು. ಗಡಿಯಾರ ತಯಾರಿಸುವ ವಿಭಾಗದಲ್ಲಿ ಸುಮಾರು ಏಳು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸಹ ಹೆಗ್ಗಳಿಕೆಯ ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ಸಚಿವರ ಮಾತಿಗೂ ಮೊದಲು ನೂತನ ಕೈಗಡಿಯಾರಗಳ ವೈಶಿಷ್ಟ್ಯತೆಯ ಬಗ್ಗೆ ಹೆಚ್ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ ಅವರು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,
ಮಾಜಿ ಸಚಿವ ಸಾರಾ ಮಹೇಶ್, ಸಂಸದ ಡಾ. ಸಿ ಎನ್ ಮಂಜುನಾಥ್, ಶಾಸಕರಾದ ಮುನಿರತ್ನ, ಎಂ.ಟಿ. ಕೃಷ್ಣಪ್ಪ, ಟಿ.ಎ. ಶರವಣ, ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಎ.ಪಿ. ರಂಗನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಮುಂತಾದವರು ಉಪಸ್ಥಿತರಿದ್ದರು.

ಕಣ್ಮನ ಸೆಳೆದ ಅರ್ಜುನ್ ಜನ್ಯ ಸಂಗೀತ ಸಂಜೆ

ಈ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಲಾಗಿದ್ದ ಕನ್ನಡ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅವರ ತಂಡದ ಸಂಗೀತ ಸಂಜೆ ಕಾರ್ಯಕ್ರಮವು ಜನಮನ ಸೂರ್ಯಗೊಂಡಿತು. ಕನ್ನಡ ಹಾಡುಗಳ ಮೂಲಕ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದರು.

ಹೆಚ್ಚಿನ ಸುದ್ದಿ