ವರದಿ : ಅಮರೇಶಣ್ಣ ಕಾಮನಕೇರಿ
ಬೆಂಗಳೂರು, ನ. 3: ಸಮಾಜಮುಖಿ ಪತ್ರಿಕೋದ್ಯಮಕ್ಕೆ ಮತ್ತೊಂದು ಹೊಸ ಅಧ್ಯಾಯ ಸೇರ್ಪಡೆಯಾಗಿದ್ದು, ಹಿರಿಯ ಪತ್ರಕರ್ತ ಆರ್. ರಾಘವೇಂದ್ರ ರಾಜು ಅವರ ಸಾರಥ್ಯದಲ್ಲಿ ಆರಂಭಗೊಂಡಿರುವ ‘ಹೊಸ ಸಂಚಲನ’ ಪಾಕ್ಷಿಕ ಪತ್ರಿಕೆ ಬೆಂಗಳೂರಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.
ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಅವರು ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಮಾಧ್ಯಮಗಳು ಸಮಾಜದ ಕಣ್ಣು ಮತ್ತು ಕಿವಿಯಾಗಿದ್ದು, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಆರ್. ರಾಘವೇಂದ್ರ ರಾಜು ಅವರು ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿದ್ದು, ತನಿಖಾ ಪತ್ರಿಕೋದ್ಯಮದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ನೇತೃತ್ವದಲ್ಲಿ ಆರಂಭವಾಗಿರುವ ಈ ಪತ್ರಿಕೆ ಜನರ ಧ್ವನಿಯಾಗಿ, ಸಮಾಜಮುಖಿ ಮೌಲ್ಯಗಳನ್ನು ಎತ್ತಿಹಿಡಿಯುವ ವಿಶ್ವಾಸಾರ್ಹ ಮಾಧ್ಯಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಲ್. ಮಂಜುನಾಥಯ್ಯ, ರಾಜ್ಯ ಕಾಂಗ್ರೆಸ್ ಮುಖಂಡ ಹಾಗೂ ಪತ್ರಿಕೆಯ ಗೌರವ ಸಂಪಾದಕ ಶಿವಶಂಕರ್ ನಾಯ್ಡು, ಪ್ರೆಸ್ ಕ್ಲಬ್ ಸದಸ್ಯ ಬಿ.ಕೆ. ಕುಮಾರ್ ಹಾಗೂ ಉದ್ಯಮಿ ವೆಂಕಟೇಶ್ ಉಪಸ್ಥಿತರಿದ್ದು, ಪತ್ರಿಕೆಯ ಆರಂಭವನ್ನು ಸ್ವಾಗತಿಸಿ ಸಂಪಾದಕೀಯ ತಂಡಕ್ಕೆ ಶುಭಾಶಯ ಕೋರಿದರು.
ಗಣ್ಯರು ಮಾತನಾಡಿ, ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ನಿಖರ, ಜವಾಬ್ದಾರಿಯುತ ಮತ್ತು ಜನಪರ ಪತ್ರಿಕೋದ್ಯಮದ ಅಗತ್ಯ ಹೆಚ್ಚಿದ್ದು, ಸಾಮಾಜಿಕ ಸಮಸ್ಯೆಗಳು, ಜನಸಾಮಾನ್ಯರ ಸಂಕಷ್ಟಗಳು ಹಾಗೂ ಆಡಳಿತದ ಲೋಪದೋಷಗಳನ್ನು ನಿರ್ಭೀತಿಯಿಂದ ಜನರ ಮುಂದೆ ತರುವಲ್ಲಿ ‘ಹೊಸ ಸಂಚಲನ’ ಮಹತ್ವದ ಪಾತ್ರ ವಹಿಸಲಿ ಎಂದು ಆಶಿಸಿದರು.
‘ಹೊಸ ಸಂಚಲನ – ಜನಮನದ ನಾಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾಗಿರುವ ಈ ಪಾಕ್ಷಿಕ ಪತ್ರಿಕೆ ಸತ್ಯ, ನ್ಯಾಯ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಓದುಗರ ವಿಶ್ವಾಸ ಗಳಿಸಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಳ್ಳಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

