KRGRV
Thursday, November 5, 2026
Homeರಾಜಕೀಯಅರಬ್ಬಿ ಸಮುದ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಕ್ಷಮೆಯಾಚಿಸಬೇಕು – ಯು.ಟಿ. ಖಾದರ್

ಅರಬ್ಬಿ ಸಮುದ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಕ್ಷಮೆಯಾಚಿಸಬೇಕು – ಯು.ಟಿ. ಖಾದರ್

ಬೆಂಗಳೂರು, ನ. 3: ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ನಾಯಕರ ಕುರಿತು ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಇದು ರಾಜಕೀಯ ಟೀಕೆಯಲ್ಲ, ಹಿಂಸೆಗೆ ಪ್ರಚೋದನೆ ನೀಡುವ ಮಾತು ಎಂದು ಆರೋಪಿಸಿದ್ದಾರೆ.

“ಕಾಂಗ್ರೆಸ್ ನಾಯಕರನ್ನು ಬಿಜೆಪಿ ಕಾರ್ಯಕರ್ತರು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ” ಎಂಬ ಹೇಳಿಕೆ ಅತ್ಯಂತ ಖಂಡನೀಯವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ಭಾಷೆ ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅರಬ್ಬಿ ಸಮುದ್ರದ ದಡದಲ್ಲಿ ಬೆಳೆದ ನಮಗೆ ಈ ಸಮುದ್ರದ ಮಹತ್ವ ಗೊತ್ತಿದೆ. ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿರುವ ಈ ಸಮುದ್ರದಲ್ಲಿ ಎಲ್ಲಾ ಜಾತಿ ಮತ್ತು ಧರ್ಮದ ಜನರು ಒಂದೇ ದೋಣಿಯಲ್ಲಿ ದುಡಿಯುತ್ತಾರೆ. ಅಲೆಗಳ ವಿರುದ್ಧ ಹೋರಾಡುವಾಗ ಜಾತಿ-ಧರ್ಮ ನೋಡದೆ ಒಬ್ಬರನ್ನೊಬ್ಬರು ಕಾಪಾಡಿಕೊಳ್ಳುತ್ತಾರೆ. ಸೌಹಾರ್ದ ಮತ್ತು ಸಹೋದರತೆಯ ಪ್ರತೀಕವಾಗಿರುವ ಅರಬ್ಬಿ ಸಮುದ್ರವನ್ನು ದ್ವೇಷದ ರಾಜಕೀಯಕ್ಕೆ ಬಳಸಬಾರದು ಎಂದು ಖಾದರ್ ಹೇಳಿದ್ದಾರೆ.

ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ ಜನಪ್ರತಿನಿಧಿಯೊಬ್ಬರು ಇಂತಹ ಹೇಳಿಕೆ ನೀಡುವುದು ಅತ್ಯಂತ ದುಃಖಕರ. ಇದರಿಂದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಛಲವಾದಿ ನಾರಾಯಣಸ್ವಾಮಿ ಅವರು ಕೂಡಲೇ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಜೊತೆಗೆ, ಈ ಹೇಳಿಕೆಯನ್ನು ಬಿಜೆಪಿ ನಾಯಕತ್ವ ಬೆಂಬಲಿಸುತ್ತದೆಯೇ ಅಥವಾ ಖಂಡಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ