||ಮಹಿಳೆಯರಿಗೆ ಹಣ ನೀಡಲು ಆರ್ಥಿಕ ಮುಗ್ಗಟ್ಟು ಎಂದ ಸರ್ಕಾರ; ₹2,660 ಕೋಟಿ ನಿಗಮದ ಖಾತೆಗೆ ವರ್ಗಾವಣೆ ||
||ಆನೇಕಲ್ ತಾಲ್ಲೂಕು ಪಂಚಾಯಿತಿ ಮೂಲಕ ₹1,111 ಕೋಟಿ ವರ್ಗಾವಣೆಗೂ ಅನುಮೋದನೆ: ತನಿಖೆಗೆ ನಿಖಿಲ್ ಆಗ್ರಹ ||
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಕಂತುಗಳನ್ನು ಪಾವತಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣಾ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ. ಮತ್ತೊಂದೆಡೆ, ಮಹಿಳೆಯರಿಗಾಗಿ ಮೀಸಲಿಟ್ಟ ₹2,660.26 ಕೋಟಿ ಅನುದಾನವನ್ನು ರಾಜ್ಯ ಖಜಾನೆಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ಜೆ.ಪಿ. ನಗರದ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ಹಣಕಾಸು ನಿರ್ವಹಣೆಯನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎ.ಪಿ. ರಂಗನಾಥ್, ವಕ್ತಾರ ಎಚ್.ಎನ್. ದೇವರಾಜ್ ಹಾಗೂ ಜಯಮುತ್ತು ಉಪಸ್ಥಿತರಿದ್ದರು.
ಆರ್ಥಿಕ ಮುಗ್ಗಟ್ಟನ್ನು ಒಪ್ಪಿಕೊಂಡ ಸರ್ಕಾರ!
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತುಗಳಿಗೆ ಆರ್ಥಿಕ ಮುಗ್ಗಟ್ಟಿನಿಂದ ಅನುದಾನ ಬಿಡುಗಡೆ ಮಾಡಲಾಗಿಲ್ಲ ಎಂದು ಸರ್ಕಾರವೇ ಹೈಕೋರ್ಟ್ಗೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದೆ.
ಸುಮಾರು 1.26 ಕೋಟಿ ಮಹಿಳೆಯರಿಗೆ ಎರಡು ತಿಂಗಳ ತಲಾ ₹4,000ರಂತೆ ಅಂದಾಜು ₹5,000 ಕೋಟಿ ಪಾವತಿ ಬಾಕಿ ಉಳಿದಿತ್ತು. ಮಹಿಳೆಯರಿಗೆ ಹಣ ನೀಡಲು ಸಾಧ್ಯವಾಗದ ಮಟ್ಟಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆಯೇ ಎಂದು ನಿಖಿಲ್ ಪ್ರಶ್ನಿಸಿದರು.
2,660 ಕೋಟಿ ಹಣ ವರ್ಗಾವಣೆ ಬಯಲು!
2025ರ ಮಾರ್ಚ್ 31ರಂದು ಗೃಹಲಕ್ಷ್ಮಿ ಯೋಜನೆಯ ₹2,660.26 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರ ಆದೇಶಿಸಿದೆ. ಅದೇ ದಿನ ಆನೇಕಲ್ ತಾಲ್ಲೂಕು ಪಂಚಾಯಿತಿ ಮೂಲಕ ಹೆಚ್ಚುವರಿ ₹1,111.03 ಕೋಟಿ ವರ್ಗಾವಣೆಗೆ ಪ್ರತ್ಯೇಕ ಅನುಮೋದನೆ ನೀಡಲಾಗಿದೆ ಎಂದು ದಾಖಲೆಗಳನ್ನು ಉಲ್ಲೇಖಿಸಿದರು.
ಒಂದೆಡೆ ಮಹಿಳೆಯರಿಗೆ ಹಣ ನೀಡಲು ಆರ್ಥಿಕ ಮುಗ್ಗಟ್ಟು ಎನ್ನುತ್ತಾರೆ. ಮತ್ತೊಂದೆಡೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಖಜಾನೆಯಿಂದ ನಿಗಮದ ಖಾತೆಗೆ ವರ್ಗಾಯಿಸುತ್ತಾರೆ. ಈ ಹಣ ಎಲ್ಲಿದೆ? ಎಷ್ಟು ಹಣ ಫಲಾನುಭವಿಗಳಿಗೆ ತಲುಪಿದೆ? ಉಳಿದ ಹಣದ ಲೆಕ್ಕವೇನು? ಎಂದು ಪ್ರಶ್ನಿಸಿದರು.
ಸದನದಲ್ಲಿ ಒಂದು ಹೇಳಿಕೆ, ನ್ಯಾಯಾಲಯದಲ್ಲಿ ಮತ್ತೊಂದು!
ಗೃಹಲಕ್ಷ್ಮಿ ಕಂತುಗಳ ಪಾವತಿ ವಿಳಂಬಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನೀಡಿದ್ದ ಮಾಹಿತಿಯಲ್ಲಿನ ತಪ್ಪನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಂತರ ಒಪ್ಪಿಕೊಂಡಿದ್ದರು. ಆದರೆ ನ್ಯಾಯಾಲಯಕ್ಕೆ ಸಲ್ಲಿಸಿದ ಆಕ್ಷೇಪಣಾ ಹೇಳಿಕೆಯಲ್ಲಿ ಸರ್ಕಾರ ಆರ್ಥಿಕ ಮುಗ್ಗಟ್ಟನ್ನು ಕಾರಣವಾಗಿ ಉಲ್ಲೇಖಿಸಿದೆ.
ಹಾಗಾದರೆ ಪಾವತಿ ವಿಳಂಬಕ್ಕೆ ನಿಜವಾದ ಕಾರಣವೇನು? ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸರ್ಕಾರ ಏನನ್ನು ಮರೆಮಾಚುತ್ತಿದೆ?” ಎಂದು ನಿಖಿಲ್ ಪ್ರಶ್ನಿಸಿದರು.
ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿ
ರಾಜ್ಯದ ಬೊಕ್ಕಸದ ಪರಿಸ್ಥಿತಿ ಏನಾಗಿದೆ? ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಏಕೆ ಎದುರಾಗಿದೆ? ಆರ್ಥಿಕ ಮುಗ್ಗಟ್ಟಿನ ಬಗ್ಗೆ ಸರ್ಕಾರವೇ ಹೇಳಿಕೊಂಡಿರುವಾಗ ರಾಜ್ಯದ ಹಣಕಾಸು ಸ್ಥಿತಿಯನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಗೃಹಲಕ್ಷ್ಮಿ ಅನುದಾನ ವರ್ಗಾವಣೆಯ ಸಂಪೂರ್ಣ ಲೆಕ್ಕವನ್ನು ಬಹಿರಂಗಪಡಿಸಿ, ಸ್ವತಂತ್ರ ತನಿಖೆ ನಡೆಸಬೇಕು. ಅರ್ಹ ಮಹಿಳೆಯರಿಗೆ ಬಾಕಿ ಇರುವ ಕಂತುಗಳನ್ನು ತಕ್ಷಣ ಪಾವತಿಸಬೇಕು. ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಹೋರಾಟ ಮುಂದುವರಿಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.

