KRGRV
Thursday, November 5, 2026
HomeCrimeಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಭೀಕರ ಹತ್ಯೆ: ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಪತ್ತೆಯಾದ ಶವ;...

ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಭೀಕರ ಹತ್ಯೆ: ಕಾರಿನ ಡಿಕ್ಕಿಯಲ್ಲಿ 9 ತುಂಡುಗಳಾಗಿ ಪತ್ತೆಯಾದ ಶವ; ಪತ್ನಿ, ಪುತ್ರ ನಾಪತ್ತೆ!

ಉಡುಪಿ: ಉದ್ಯೋಗ ಅರಸಿ ಸುಮಾರು 20 ವರ್ಷಗಳ ಹಿಂದೆ ದುಬೈ ಸಮೀಪದ ಶಾರ್ಜಾಕ್ಕೆ ತೆರಳಿ ನೆಲೆಸಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಬರ್ಬರವಾಗಿ ಹತ್ಯೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ (Prakash Kundar) ಎಂಬವರ ಮೃತದೇಹ ಅವರ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳೊಳಗೆ ಒಂಬತ್ತು ತುಂಡುಗಳಾಗಿ ಪತ್ತೆಯಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಕಾಶ್ ಅವರು ಶಾರ್ಜಾದಲ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಕುಟುಂಬದವರೊಂದಿಗೆ ಅವರ ಸಂಪರ್ಕ ಕಡಿತಗೊಂಡಿತ್ತು. ಸಹೋದರ ಪ್ರಶಾಂತ್ ಕುಂದರ್ ಅವರು ವಾಯ್ಸ್ ಮೆಸೇಜ್ ಕಳುಹಿಸಿದಾಗ, ಪ್ರತಿಯಾಗಿ ಪ್ರಕಾಶ್ ಅವರಿಂದ ಧ್ವನಿ ಸಂದೇಶದ ಬದಲು ಕೇವಲ ಟೆಕ್ಸ್ಟ್ ಮೆಸೇಜ್ ಬಂದಿತ್ತು. ಇದರಿಂದ ಕುಟುಂಬಸ್ಥರಿಗೆ ಅನುಮಾನ ಮೂಡಿತ್ತು ಎನ್ನಲಾಗಿದೆ.

ಈ ಬಗ್ಗೆ ಪ್ರಕಾಶ್ ಕೆಲಸ ಮಾಡುತ್ತಿದ್ದ ಏರ್‌ಪೋರ್ಟ್ ಏಜೆನ್ಸಿಯನ್ನು ಸಂಪರ್ಕಿಸಿದಾಗ, ಅವರು ಭಾರತಕ್ಕೆ ಮರಳಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಆದರೆ ಅವರು ಭಾರತಕ್ಕೆ ಬಂದಿರುವ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಸುಳಿವು ಇರಲಿಲ್ಲ. ನಂತರ ಪ್ರಕಾಶ್ ಭಾರತಕ್ಕೆ ಮರಳಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿದ್ದ ಸಂಬಂಧಿಕರ ಮೂಲಕ ಪೊಲೀಸರಿಗೆ ದೂರು ನೀಡಲಾಗಿತ್ತು.

ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಪ್ರಕಾಶ್ ಅವರ ಕಾರಿನ ಡಿಕ್ಕಿಯಲ್ಲಿ ಎರಡು ಚೀಲಗಳೊಳಗೆ ಒಂಬತ್ತು ತುಂಡುಗಳಾಗಿ ವಿಂಗಡಿಸಲಾಗಿದ್ದ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಮೃತದೇಹದ ಗುರುತು ಪತ್ತೆಯಾಗದಂತೆ ಮಾಡಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಳಿಕ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಪರೀಕ್ಷಿಸಿದಾಗ ಪತ್ತೆಯಾದ ಮೃತದೇಹ ಪ್ರಕಾಶ್ ಕುಂದರ್ ಅವರದ್ದೇ ಎಂಬುದು ದೃಢಪಟ್ಟಿದೆ ಎನ್ನಲಾಗಿದೆ.

ಜುಲೈ ತಿಂಗಳ ಕೊನೆಯ ಭಾಗದಿಂದಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಗೂ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಆದರೆ ಪ್ರಕಾಶ್ ಅವರನ್ನು ಯಾರು ಹತ್ಯೆ ಮಾಡಿದ್ದಾರೆ? ಹತ್ಯೆಗೆ ಕಾರಣವೇನು? ಮೃತದೇಹವನ್ನು ತುಂಡುಗಳಾಗಿ ಮಾಡಿ ಕಾರಿನ ಡಿಕ್ಕಿಯಲ್ಲಿ ಇರಿಸಿದ್ದೇಕೆ? ಎಂಬ ಹಲವು ಪ್ರಶ್ನೆಗಳು ಇನ್ನೂ ನಿಗೂಢವಾಗಿವೆ.

ಪತ್ನಿ, ಪುತ್ರನ ನಾಪತ್ತೆಯಿಂದ ಮತ್ತಷ್ಟು ಅನುಮಾನ

ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಪ್ರಕಾಶ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ಕೂಡ ಘಟನೆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅವರಿಬ್ಬರೂ ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಗೆ ಲಭ್ಯವಾಗಿಲ್ಲ.

ಆದರೆ ಪತ್ನಿ ಅಥವಾ ಪುತ್ರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸದ್ಯ ಯಾವುದೇ ದೃಢಪಟ್ಟ ಮಾಹಿತಿ ಇಲ್ಲ. ಅವರ ನಾಪತ್ತೆಗೂ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಸದ್ಯ ಶಾರ್ಜಾ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಪ್ರಕಾಶ್ ಅವರ ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದು, ಮೃತದೇಹ ಭಾರತಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರದ ಮೂಲಕವೂ ಸಮಗ್ರ ತನಿಖೆಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿದೇಶದಲ್ಲಿ ಉದ್ಯೋಗ ಮಾಡಿಕೊಂಡು ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರ ದಾರುಣ ಅಂತ್ಯ ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಪ್ರಕಾಶ್ ಅವರ ಹತ್ಯೆಯ ಹಿಂದಿನ ಸತ್ಯ ಹಾಗೂ ನಾಪತ್ತೆಯಾಗಿರುವ ಪತ್ನಿ ಮತ್ತು ಪುತ್ರನ ಸುಳಿವು ತನಿಖೆಯಿಂದ ಹೊರಬರಬೇಕಿದೆ.

ಹೆಚ್ಚಿನ ಸುದ್ದಿ