ಬೆಳಗಾವಿ: ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿರುವ ಬೆಳಗಾವಿ ಜಿಲ್ಲಾಡಳಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ “ಲಾಭ ಹಂಚಿಕೊಳ್ಳುವ ಸೂತ್ರದಡಿಯಲ್ಲಿ ಕಬ್ಬಿನ ಬೆಲೆಯನ್ನು ನಿಗದಿಪಡಿಸಿದೆ ಆದೇಶ ಹೊರಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಈ ಸೂತ್ರವನ್ನು ಸಿದ್ಧಪಡಿಸಲಾಗಿದೆ. ರೈತರ ಬೇಡಿಕೆಗಳಿಗೆ ಅನುಗುಣವಾಗಿರುವ ಈ‌ ಸೂತ್ರಕ್ಕೆ ಕಾರ್ಖಾನೆ ಮಾಲೀಕರು ಸಹಮತ ಸೂಚಿಸಿದ್ದು, ರಾಷ್ಟ್ರಮಟ್ಟದಲ್ಲಿ ಇದೇ ಮೊದಲ ಬಾರಿಗೆ “ಲಾಭ ಹಂಚಿಕೊಳ್ಳುವ ಸೂತ್ರ ಜಾರಿಗೊಳಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಆಡಳಿತ ಇಂದು ಪ್ರಕಟಣೆ ಹೊರಡಿಸಿದೆ.

ಈ ಮುಂಚೆ ಕಾರ್ಖಾನೆಗಳ ಒಟ್ಟು ಆದಾಯದ ಮೇಲೆ ಲಾಭ ಹಂಚಿಕೆ ಇರುತ್ತಿತ್ತು. ಆದರೆ ಈ ಹೊಸ ಸೂತ್ರದ ಪ್ರಕಾರ ಸಕ್ಕರೆ ಮಾರಾಟದ ಸರಾಸರಿ ಲಾಭವನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದರಿಂದ ಕಬ್ಬು ಪೂರೈಸುವ ರೈತರಿಗೆ ಇನ್ನಷ್ಟು ಉತ್ತಮ ದರ ಸಿಗಲಿದೆ ಎಂದು ಜಿಲ್ಲಾ ಆಡಳಿತ ನಿರೀಕ್ಷಿಸಿದೆ.

ಲಾಭ ಹಂಚಿಕೆ” ಸೂತ್ರ ರೂಪಿಸಿದ ಜಿಲ್ಲಾಡಳಿತ: ಕಬ್ಬಿನ ದರ ಹೆಚ್ಚಿಸುವಂತೆ ಆಗ್ರಹಿಸಿ ರೈತರು ಹಲವಾರು ದಿನಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರಕಾರ ಕೂಡ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು‌ ಬೆಳೆಗಾರರ ಜತೆ ಹಲವು ಸುತ್ತಿನ‌ ಮಾತುಕತೆಯ ಬಳಿಕ ರೈತರ ಹಿತರಕ್ಷಣೆ ದೃಷ್ಟಿಯಿಂದ ಇತಿಹಾಸದಲ್ಲೇ ಮೊದಲ ಎನ್ನಲಾಗಿರುವ “ಲಾಭ ಹಂಚಿಕೆ” ಸೂತ್ರವನ್ನು ರೂಪಿಸಿದೆ.

ಇದರಲ್ಲಿ ಮುಖ್ಯವಾಗಿ 2026-27ನೇ ಹಂಗಾಮಿನ ಕಬ್ಬು ನುರಿಸುವ ದರ ನಿಗದಿ ವಿಚಾರವಾಗಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3500 ಮುಂಗಡ ದರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

350 ಹೆಚ್ಚುವರಿ ಪಾವತಿಸಲು ಕಾರ್ಖಾನೆಗಳು ಒಪ್ಪಿಗೆ: ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದಿನ ಹಂಗಾಮಿಗಿಂತ ಈ ಬಾರಿ ಪ್ರತಿ ಟನ್‌ಗೆ ₹350 ಹೆಚ್ಚುವರಿ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ.

ಕಬ್ಬಿನ ಪಾವತಿಯ ವಿವರಗಳು ಈ ಕೆಳಗಿನಂತಿವೆ: ಒಪ್ಪಂದದ ಪ್ರಕಾರ, ಮೊದಲ ಕಂತಿನಲ್ಲಿ ಪ್ರತಿ ಟನ್‌ಗೆ ₹3500 ಪಾವತಿಸಲಾಗುತ್ತದೆ. ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ₹100 ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಲ್ಲದೆ, ಹೊಸ ಹಂಗಾಮು ಆರಂಭವಾಗುವ ಮೊದಲು ಪ್ರತಿ ಕೆ.ಜಿ. ಸಕ್ಕರೆಯ ಸರಾಸರಿ ಮಾರುಕಟ್ಟೆ ದರ ₹45 ಮೀರಿದರೆ, ಅದರ ಆಧಾರದ ಮೇಲೆ ಅಂತಿಮ ಕಂತಿನ ಹಣ ಪಾವತಿಸಲಾಗುತ್ತದೆ. ಸಕ್ಕರೆಯ ಸರಾಸರಿ ದರ ₹48 ಇದ್ದರೆ ಪ್ರತಿ ಟನ್ ಕಬ್ಬಿಗೆ ₹3650, ₹49 ಇದ್ದರೆ ₹3750, ₹50 ಇದ್ದರೆ ₹3850 ಹಾಗೂ ₹55 ಇದ್ದರೆ ₹4350 ದರ ನಿಗದಿಪಡಿಸುವ ಲೆಕ್ಕಾಚಾರವನ್ನು ಒಪ್ಪಂದದಲ್ಲಿ ನಮೂದಿಸಲಾಗಿದೆ. ಈಗಾಗಲೇ ಪಾವತಿಸಿದ ₹3600 ಕಡಿತಗೊಳಿಸಿ ಉಳಿದ ಹೆಚ್ಚುವರಿ ಮೊತ್ತದಲ್ಲಿ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆಯಾಗಲಿದೆ.

ಕಾರ್ಖಾನೆ ಆರಂಭಿಸಲು ಒಪ್ಪಿಗೆ: ತೀವ್ರ ನೀರಿನ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕಬ್ಬು ಬೆಳೆ ಹಾನಿಯಾಗುವುದನ್ನು ತಪ್ಪಿಸಲು ತಕ್ಷಣವೇ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕೆಂದು ರೈತ ಮುಖಂಡರು ಮತ್ತು ಕಾರ್ಖಾನೆಗಳ ಮಾಲೀಕರು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ. ಒಟ್ಟಾರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಾರಿಯ ಒಪ್ಪಂದವು ರೈತರಿಗೆ ಹಿಂದಿನ ಹಂಗಾಮಿಗಿಂತ ಪ್ರತಿ ಟನ್‌ಗೆ 350 ಹೆಚ್ಚುವರಿ ಲಾಭವನ್ನು ತಂದುಕೊಡಲಿದೆ.