ಬೆಂಗಳೂರು, ನ. 6: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಬಳಸಿದ ಹೇಳಿಕೆ ಗ್ರಾಮೀಣ ಜನರಿಗೆ ಅವಮಾನವಾಗಿದ್ದು, ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.
ಗುರುವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾತನಾಡಿರುವ ಅವರು, ಕುಮಾರಸ್ವಾಮಿ ವಿರುದ್ಧ ಟೀಕೆ ಮಾಡುವ ಭರದಲ್ಲಿ ಪ್ರಿಯಾಂಕ್ ಖರ್ಗೆ, “ನೀವು ಹಳ್ಳಿಯ ಗುಗ್ಗುನಾ?” ಎಂಬ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹೇಳಿಕೆ ಮೂಲಕ ದೇಶದ ಕೋಟ್ಯಂತರ ಗ್ರಾಮೀಣ ಜನರ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡಲಾಗಿದೆ. ಹಳ್ಳಿಯಲ್ಲಿ ವಾಸಿಸುವವರೆಲ್ಲರೂ ದಡ್ಡರು ಎಂಬ ಸಂದೇಶವನ್ನು ಈ ಹೇಳಿಕೆ ನೀಡುತ್ತದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಇಂತಹ ಹೇಳಿಕೆ ಸಂಪೂರ್ಣ ಖಂಡನೀಯವಾಗಿದ್ದು, ಪ್ರಿಯಾಂಕ್ ಖರ್ಗೆ ಯಾವುದೇ ಷರತ್ತಿಲ್ಲದೆ ಸಾರ್ವಜನಿಕವಾಗಿ ಗ್ರಾಮೀಣ ಜನರ ಕ್ಷಮೆಯಾಚಿಸಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಗ್ರಾಮೀಣ ಭಾಗದ ಕೋಟ್ಯಂತರ ಮತದಾರರೇ ಕಾರಣ ಎಂಬುದನ್ನು ಪ್ರಿಯಾಂಕ್ ಖರ್ಗೆ ನೆನಪಿಸಿಕೊಳ್ಳಬೇಕು ಎಂದ ಅವರು, ಗ್ರಾಮೀಣ ಜನರ ಬಗ್ಗೆ ತಾತ್ಸಾರ ಧೋರಣೆ ತೋರಿಸುವುದು ಸರಿಯಲ್ಲ ಎಂದು ಹೇಳಿದರು.
ತಾವು ಚಿತ್ರದುರ್ಗ ಜಿಲ್ಲೆಯ ದೂರದ ಹಳ್ಳಿಯೊಂದರಿಂದ ಬಂದಿರುವುದಾಗಿ ಹೇಳಿದ ರವಿಕುಮಾರ್, ತಮ್ಮ ಗ್ರಾಮೀಣ ಹಿನ್ನೆಲೆಯ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದರು. ಗ್ರಾಮೀಣ ಜನರ ಗೌರವಕ್ಕೆ ಧಕ್ಕೆ ತಂದಿರುವ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಮುಕ್ತ ಮನಸ್ಸಿನಿಂದ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

