ಬೆಂಗಳೂರು, ನ. 6: ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ನೋಂದಾಯಿತ ಕ್ಲಿನಿಕ್ ಇಲ್ಲದೆ ಹೋಟೆಲ್ ಕೊಠಡಿಗಳಲ್ಲೇ ಸೌಂದರ್ಯ ಚಿಕಿತ್ಸೆ ಹಾಗೂ ವೈದ್ಯಕೀಯ ಇಂಜೆಕ್ಷನ್ಗಳನ್ನು ನೀಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.
ಭಾರತೀಯ ಚರ್ಮರೋಗ ತಜ್ಞರ ಸಂಘ (IADVL) ಬೆಂಗಳೂರು ಘಟಕ ನೀಡಿದ ದೂರಿನ ಆಧಾರದ ಮೇಲೆ ಆರೋಗ್ಯ ಇಲಾಖೆ, ಔಷಧ ನಿಯಂತ್ರಣ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ತಂಡ ಸ್ಥಳ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ ತೂಕ ಇಳಿಸುವ ಮಾತ್ರೆಗಳು, ಕೊಲಾಜನ್ ಉತ್ಪನ್ನಗಳು ಸೇರಿದಂತೆ ವಿವಿಧ ಪೂರಕಗಳು ಹಾಗೂ ವೈದ್ಯಕೀಯ ಬಳಕೆಗೆ ಮಾತ್ರ ಮೀಸಲಾಗಿರುವ ಕೊಬ್ಬು ಕರಗಿಸುವ ‘Lipo Lab PPC’ ಇಂಜೆಕ್ಷನ್ನ ಖಾಲಿ ಬಾಕ್ಸ್ ಪತ್ತೆಯಾಯಿತು. ಆ ಬಾಕ್ಸ್ನಲ್ಲಿ ಕಡ್ಡಾಯವಾಗಿ ನಮೂದಿಸಬೇಕಾದ CDSCO ಆಮದು ಅಥವಾ ತಯಾರಿಕಾ ಪರವಾನಗಿ ಸಂಖ್ಯೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದವರ ವೈದ್ಯಕೀಯ ಅರ್ಹತೆ, ವೈದ್ಯಕೀಯ ನೋಂದಣಿ ಹಾಗೂ ಪತ್ತೆಯಾದ ಉತ್ಪನ್ನಗಳ ಮೂಲದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ತನಿಖೆಯಲ್ಲಿ ನಿಯಮ ಉಲ್ಲಂಘನೆ ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಈ ಕುರಿತು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಹೋಟೆಲ್, ಮನೆ ಅಥವಾ ತಾತ್ಕಾಲಿಕ ಶಿಬಿರಗಳಲ್ಲಿ ನೀಡಲಾಗುವ ಸೌಂದರ್ಯ ಚಿಕಿತ್ಸೆಗಳ ಆಮಿಷಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದೆ. ಯಾವುದೇ ಇಂಜೆಕ್ಷನ್ ಅಥವಾ ವೈದ್ಯಕೀಯ ಚಿಕಿತ್ಸೆಯನ್ನು ನೋಂದಾಯಿತ ಆಸ್ಪತ್ರೆ ಅಥವಾ ಕ್ಲಿನಿಕ್ಗಳಲ್ಲಿ ಅರ್ಹ ವೈದ್ಯರಿಂದ ಮಾತ್ರ ಪಡೆಯಬೇಕು. ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕೆಂದು ತಿಳಿಸಿದೆ.

