ಬೆಂಗಳೂರು : ಮುಂಬರುವ ಲೋಕಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ತೆರೆಮರೆಯಲ್ಲಿ ‘ಆಪರೇಷನ್ ಹಸ್ತ’ಕ್ಕೆ ಪ್ಲಾನ್ ಮಾಡುತ್ತಿರುವ ಕೈ ಪಡೆ, ಟಿಕೆಟ್ ಹಂಚಿಕೆ ಕುರಿತಾಗಿಯೂ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಕಾಂಗ್ರೆಸ್ ಪಣ ತೊಟ್ಟಿದೆ. ಅದರಲ್ಲೂ ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳ ಮೇಲೆ ವಿಶೇಷ ಕಣ್ಣಿಟ್ಟಿದೆ. ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಮೂರೂ ಕ್ಷೇತ್ರಗಳನ್ನು ಗೆಲ್ಲಲು ಯೋಜನೆ ರೂಪಿಸಿದೆ. ಕಳೆದ ಬಾರಿ ಈ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿತ್ತು.
ಮೂರು ಕ್ಷೇತ್ರಗಳನ್ನು ಗೆಲ್ಲಲು ಮಾಸ್ಟರ್ : ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿರುವ ಕಾಂಗ್ರೆಸ್, ಮೂವರು ಸಂಭವನೀಯ ಅಭ್ಯರ್ಥಿಗಳನ್ನೂ ಆಯ್ಕೆ ಮಾಡಿದೆ ಎಂದು ಹೇಳಲಾಗ್ತಿದೆ.
ಬೆಂಗಳೂರು ದಕ್ಷಿಣದಿಂದ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ. ಈ ಮೂಲಕ ಒಕ್ಕಲಿಗ, ರೆಡ್ಡಿ ಹಾಗೂ ಹಿಂದುಳಿದ ವರ್ಗಗಳ ಮತಬ್ಯಾಂಕ್ ಸೆಳೆಯುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ. ಇನ್ನು ಬೆಂಗಳೂರು ಕೇಂದ್ರದಿಂದ ಶಾಂತಿನಗರ ಶಾಸಕರ ಎನ್.ಎ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಕುರಿತು ಹೈಕಮಾಂಡ್ ಜೊತೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು ಉತ್ತರದಿಂದ ಕುಸುಮ ಹನುಮಂತರಾಯಪ್ಪ ಅವರನ್ನು ಕಣಕ್ಕಿಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಇದೆ. ಎರಡು ಬಾರಿ ಚುನಾವಣೆಯಲ್ಲಿ ಸೋತಿರುವ ಕುಸುಮ, ಅನುಕಂಪದ ಆಧಾರದಲ್ಲಿ ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.