ಮಂಡ್ಯ: ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಯೋಜನೆಯ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಶುಕ್ರವಾರ ಚಾಲನೆ ನೀಡಿದರು. ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿ ಶಾಲೆಗಳ 1ರಿಂದ 10 ನೇ ತರಗತಿ ವರಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ವಾರದಲ್ಲಿ ಎರಡು ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆ ಹಣ್ಣು ಶೇಂಗಾ ಚಿಕ್ಕಿ ವಿತರಿಸುವ ಯೋಜನೆ ಇದಾಗಿದೆ.
ಸುಮಾರು 60 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದು, ಸುಮಾರು 1.20 ಕೋಟಿ ಮೊಟ್ಟೆಗಳನ್ನು ವಾರಕ್ಕೆ ಎರಡು ಬಾರಿ ಶಾಲೆಗಳಲ್ಲಿ ಒದಗಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಎನ್. ಚೆಲುವರಾಯಸ್ವಾಮಿ, ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಸಿರಿಧಾನ್ಯದ ತಿನಿಸುಗಳನ್ನೂ ಸೇರ್ಪಡೆ ಗೊಳಿಸಬೇಕು. ಇದರಿಂದ ರೈತರಿಗೂ ಪ್ರೋತ್ಸಾಹ ಸಿಗಲಿದೆ ಮಕ್ಕಳೂ ಶಕ್ತಿವಂತರಾಗುತ್ತಾರೆ ಎಂದು ಮನವಿ ಮಾಡಿದರು.