ಬೆಂಗಳೂರು: ಕೆಲ ಜನಪ್ರತಿನಿಧಿಗಳು ಆಸ್ತಿ ವಿವರ
ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಜೂನ್ 30ರೊಳಗೆ ಪ್ರತಿ ವರ್ಷ ಎಲ್ಲಾ ಜನಪ್ರತಿನಿಧಿಗಳು ಆಸ್ತಿ ವಿವರವನ್ನು ಸಲ್ಲಿಸಬೇಕು ಎಂದು ಖಡಕ್ ಆಗಿ ಸೂಚಿಸಿದೆ.
2022-23 ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಶಾಸಕರ ಮಾಹಿತಿ ಪ್ರಕಟಿಸಿರುವ ಲೋಕಾಯುಕ್ತ ಅಧಿಕಾರಿಗಳು.. ಕಳೆದ ಬಾರಿ ಸಚಿವರಾಗಿದ್ದ ಶ್ರೀರಾಮುಲು, ಕೆ.ಸಿ ನಾರಾಯಣಗೌಡ, ಎಸ್.ಅಂಗಾರ ಆಸ್ತಿ ವಿವರ ಸಲ್ಲಿಸದೇ ಲೋಪ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಾರಿ ರಹೀಂಖಾನ್, ಕೆ.ಎನ್ ರಾಜಣ್ಣ, ಜಮೀರ್ ಅಹಮ್ಮದ್ ಖಾನ್, ರಾಮಲಿಂಗಾ ರೆಡ್ಡಿ, ಕೆ.ಹೆಚ್ ಮುನಿಯಪ್ಪ ಆಸ್ತಿ ವಿವರ ಸಲ್ಲಿಸದೇ ಲೋಪವೆಸಗಿದ್ದಾರೆ.
ಕಳೆದ ವಿಧಾನಸಭೆ ಅವಧಿಯಲ್ಲಿ 81 ಮಂದಿ ಶಾಸಕರಿಂದ ಆಸ್ತಿ ವಿವರ ಸಲ್ಲಿಸಿಲ್ಲ. ಈ ಬಾರಿಯ ವಿಧಾನಸಭೆ ಅವಧಿಯಲ್ಲಿ 51 ಶಾಸಕರು ಆಸ್ತಿ ವಿವರವನ್ನು ಸಲ್ಲಿಕೆ ಮಾಡಿಲ್ಲ. 21 ಮಂದಿ ವಿಧಾನ ಪರಿಷತ್ ಸದಸ್ಯರಿಂದಲೂ ಆಸ್ತಿ ವಿವರ ಸಲ್ಲಿಕೆ ಆಗಿಲ್ಲ.
ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಮುರುಗೇಶ್ ನಿರಾಣಿ ಜೂನ್ 30 ರೊಳಗಾಗಿ ಆಸ್ತಿ ವಿವರವನ್ನು ಸಲ್ಲಿಸಿದ್ದಾರೆ. 10 ಮಂದಿ ಶಾಸಕರು, ಒಬ್ಬ ವಿಧಾನ ಪರಿಷತ್ ಸದಸ್ಯರು ಅವಧಿ ಮುಗಿದ ಬಳಿಕ ಆಸ್ತಿ ವಿವರ ಸಲ್ಲಿಸಿದ್ದಾರೆ. ಆಸ್ತಿ ವಿವರ ಸಲ್ಲಿಸದ ಶಾಸಕರು, ಸಚಿವರಿಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸೆಪ್ಟೆಂಬರ್ 1 ರಂದು ನೊಟೀಸ್ ನೀಡಿದ್ದರೂ ಆಸ್ತಿ ವಿವರ ಸಲ್ಲಿಸಿಲ್ಲ ಎನ್ನಲಾಗಿದೆ.

