KRGRV
Monday, December 23, 2024
Homeಜಿಲ್ಲಾ ಸುದ್ದಿಗಳುKarnataka Rains : ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ

Karnataka Rains : ದಕ್ಷಿಣ ಕನ್ನಡ, ಚಿತ್ರದುರ್ಗದಲ್ಲಿ ಉತ್ತಮ, 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ

ಬೆಂಗಳೂರು: ಈ ವಾರವೂ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆ. ಹಿಂದಿನ ವಾರ 6 ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದರೆ, 17 ಜಿಲ್ಲೆಗಳಲ್ಲಿ ಮಳೆರಾಯನ ದರ್ಶನವೇ ಇಲ್ಲ. ಇನ್ನು 7 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿತು.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಡಿ. 6ರಿಂದ 13ರ ವರೆಗೆ ಕರ್ನಾಟಕದಲ್ಲಿ ಸುರಿದಿರುವ ವಾಡಿಕೆ ಮಳೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ

ದಕ್ಷಿಣ ಕನ್ನಡ, ಚಿತ್ರ ದುರ್ಗದಲ್ಲಿ ಉತ್ತಮ ಮಳೆ ಸುರಿದಿದ್ದರೆ, ಬೆಂಗಳೂರು, ಚಾಮರಾಜನಗರ, ಕಲಬುರಗಿ, ಬೆಳಗಾವಿ ಸಹಿತ ಹಲವು ಜಿಲ್ಲೆಗಳಲ್ಲಿ ಮಳೆಯಾಗಿಲ್ಲ.

ಶನಿವಾರವೂ ಕೆಲವು ಕಡೆ ಹಗುರ ಮಳೆಯಾಗಿದ್ದರೆ, ಮುಂದಿನ ಎರಡು ದಿನವೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ವಿಜಯಪುರ, ಚಿಕ್ಕಮಗಳೂರಿನಲ್ಲಿ ಶನಿವಾರ ಚಳಿಯ ಪ್ರಮಾಣ ಅಧಿಕವಾಗಿತ್ತು.

ಎಲ್ಲೆಲ್ಲಿ ಮಳೆ ಹೇಗಿತ್ತು

ಹಿಂದಿನ ವಾರ ಕರ್ನಾಟಕದ 6 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಅದರಲ್ಲೂ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಬಯಲು ಸೀಮೆಯ ಚಿತ್ರದುರ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಮಲೆನಾಡಿನ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲೂ ವಾಡಿಕೆಗಿಂತ ಕೊಂಚ ಹೆಚ್ಚಿನ ಮಳೆ ಸುರಿದಿದೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲೂ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ. ದಕ್ಷಿಣ ಕನ್ನಡ(ಶೇ.1005 ) ಚಿಕ್ಕಮಗಳೂರು(ಶೇ.818 ),ಚಿತ್ರದುರ್ಗ( ಶೇ.961), ಹಾಸನ(ಶೇ.406), ಕೊಡಗು( ಶೇ.121), ಚಿಕ್ಕಬಳ್ಳಾಪುರದಲ್ಲಿ( ಶೇ.45 ) ಹೆಚ್ಚು ಮಳೆಯಾದ ವರದಿಯಾಗಿದೆ.

ಕಳೆದ ವಾರ ಮಳೆ 17 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ. ದಕ್ಷಿಣದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ , ಕರಾವಳಿಯಲ್ಲಿ ಉತ್ತರ ಕನ್ನಡ, ಉತ್ತರ ಕರ್ನಾಟಕದಲ್ಲಿ ಹಾವೇರಿ, ಬಳ್ಳಾರಿ, ಕೊಪ್ಪಳ. ಗದಗ, ಧಾರವಾಡ, ಬೆಳಗಾವಿ. ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶೇ. 100ರಷ್ಟು ಮಳೆ ಕೊರತೆಯಾಗಿದೆ ಎಂದು ತಿಳಿಸಲಾಗಿದೆ.

ಅದೇ ರೀತಿ ಮೈಸೂರು(ಶೇ.85) ಮಂಡ್ಯ(ಶೇ85) ರಾಮನಗರ (ಶೇ.86) ದಾವಣಗೆರೆ (ಶೇ.74) ಜಿಲ್ಲೆಯಲ್ಲೂ ಮಳೆ ಕೊರತೆಯಾಗಿದೆ. ತುಮಕೂರು (ಶೇ.23), ಉಡುಪಿ (ಶೇ. 23), ಶಿವಮೊಗ್ಗ (ಶೇ. 28 ) ಕಡಿಮೆ ಮಳೆ ಕೊರತೆ ಇರುವ ಜಿಲ್ಲೆಗಳ ಪಟ್ಟಿಯಲ್ಲಿವೆ.

ಹೆಚ್ಚಿನ ಸುದ್ದಿ