ಮೈಸೂರು: ಹಠಮಾರಿತನ ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಕಾನೂನಿಗೆ ತಲೆ ಬಾಗವುದು ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಲಹೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯರಿಗೆ ಮೊದಲೇ ಹೇಳಿದ್ದೆ ಕೇವಲ 14 ಸೈಟ್‌ಗಳಿಗೆ ಏಕೆ ಹೀಗೆ ಆಡ್ತಿರಾ. ಅದೆಲ್ಲವನ್ನು ವಾಪಸ್ ಕೊಡಿ. ತನಿಖೆಗೆ ಸಹಕರಿಸಿ. ನಿಮ್ಮ ದೊಡ್ಡತನ ತೋರಿಸಿ, ನಿಮ್ಮ ಕುರ್ಚಿಗೆ ಗೌರವ ಕೊಡಿ ಅಂದಿದ್ದೆ. ಆ ನಂತರ ತನಿಖೆ ಆದಮೇಲೆ ಎಲ್ಲವೂ ಸರಿಯಾಗುತ್ತಿತ್ತು ಎಂದರು
ಸಿದ್ದರಾಮಯ್ಯರಿಗೆ ನಾವು ಹೇಳಿದ ಮಾತುಗಳು ಮುಖ್ಯ ಎನಿಸಲಿಲ್ಲ. ಅವರ ಸುತ್ತ ಇರೋರು ಹೇಳೋದು ಮುಖ್ಯ ಅನಿಸಿದೆ. ಅದಕ್ಕೆ ಈಗ ಈ ಸ್ಥಿತಿ ಬಂದಿದೆ ಎಂದು ಕುಟುಕಿದರು.
ನಾನು ರಾಜೀನಾಮೆ ಕೊಡಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅನ್ನೋದೆಲ್ಲ ಬಿಡಬೇಕು. ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು. ಹಿಂದುಳಿದ ವರ್ಗಗಳ ನಾಯಕರೆನಿಸಿಕೊಂಡಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲೂ ನಿಮ್ಮ ಗೌರವ ಹೆಚ್ಚಾಗುತ್ತದೆ. ತಕ್ಷಣ ರಾಜೀನಾಮೆ ಕೊಟ್ಟು. ಕುರ್ಚಿ ಬಿಟ್ಟು ಬನ್ನಿ. ನಿಮ್ಮ ಬಗ್ಗೆ ನಮಗೆ ಗೌರವ ಇದೆ ಎಂದರು.