KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಮೈಸೂರು ಜಿಲ್ಲಾ ಸಮಿತಿಯ ವಂಚನೆ :...

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಮೈಸೂರು ಜಿಲ್ಲಾ ಸಮಿತಿಯ ವಂಚನೆ : ದಾಖಲೆಗಳ ಬಿಡುಗಡೆ

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಹಸ್ರಾರು ಕೋಟಿ ರೂ ನಷ್ಟ

ಮನೆಗೆ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಕಂಗಾಲು

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಮೈಸೂರು ಸಂಘದ ಕೆಲ ಪದಾಧಿಕಾರಿಗಳು ಸಹಸ್ರಾರು ಕೋಟಿ ರೂಪಾಯಿ ಮೌಲ್ಯದ ಮತ್ತೊಂದು ತೆಲಗಿ ಮಾದರಿಯ ನಕಲಿ ಛಾಪಾ ಕಾಗದ ಹಗರಣ ನಡೆಸಿದ್ದು, ಕಾನೂನು ಬಾಹಿರ ಫ್ರಾಂಕಿಂಗ್ ಸೇವೆಗಳ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟುವ ಜೊತೆಗೆ ಈ ಕುರಿತು ವಿಶೇಷ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಆರ್. ಈಶ್ವರ ರಾಜು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಮೈಸೂರು ಜಿಲ್ಲಾ ಸಮಿತಿಯ

ಪದಾಧಿಕಾರಿಗಳು ಭಾರೀ ಪ್ರಮಾಣದಲ್ಲಿ ಅಕ್ರಮಗಳನ್ನು ನಡೆಸಿದ್ದು, ಗ್ರಾಹಕರ ಹಿತ ರಕ್ಷಣೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಬೆಂಗಾವಲಾಗಿ ನಿಲ್ಲಬೇಕಾದ ಇವರು ಅಕ್ಷರಶಃ ಬೇಲಿಯೇ ಎದ್ದು ಹೊಲ ಮೇಯ್ದಂತೆ ವರ್ತಿಸಿದ್ದಾರೆ. ವಿದ್ಯುತ್ ಗುತ್ತಿಗೆದಾರರ ಮೂಲಕ ಮನೆಗೆ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್. ಈಶ್ವರ ರಾಜು, ವಿದ್ಯುತ್ ಸಂಪರ್ಕ ಪಡೆಯಲು ಗುತ್ತಿಗೆದಾರರು ಮತ್ತು ಗ್ರಾಹಕರ ನಡುವೆ ಒಪ್ಪಂದ ಮಾಡಿಕೊಳ್ಳುವ ಛಾಪಾ ಕಾಗದದಲ್ಲಿ ಭಾರೀ ಅಕ್ರಮ ನಡೆದಿದೆ. ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ಕೆ.ವಿ. ಅರವಿಂದ್ ನೇತೃತ್ವದ ವಿಭಾಗೀಯ ಪೀಠ ಎಲ್ಲಾ ವಾಸ್ತವಾಂಶಗಳನ್ನು ಪರಿಶೀಲಿಸಿ ಸೂಕ್ತ ಮೌಲ್ಯ ಮಾಪನ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಕಳೆದ ತಿಂಗಳ 27 ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

ಗುತ್ತಿಗೆದಾರರ ಸಂಘದ ವಂಚಕರು ಕಳೆದ ಏಳೆಂಟು ವರ್ಷಗಳಿಂದ ಅವ್ಯಾಹತವಾಗಿ ಅಕ್ರಮ ನಡೆಸುತ್ತಿದ್ದು, ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಅಸ್ಥಿತ್ವದಲ್ಲಿರುವ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಇದರಿಂದ ಕೆಟ್ಟ ಹೆಸರು ಬಂದಿದೆ. ಬೊಕ್ಕಸಕ್ಕೆ ನಷ್ಟವಾಗಿರುವ ಮೊತ್ತವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು. ಸಮಗ್ರ ತನಿಖೆ ನಡೆಯುವವರೆಗೆ ಸಂಘಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಇಲ್ಲವಾದಲ್ಲಿ ತನಿಖೆ ಹಾದಿ ತಪ್ಪುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬೊಕ್ಕಸಕ್ಕೆ ಹಾನಿಯಾಗಿರುವ ಜೊತೆಗೆ ಗ್ರಾಹಕರು ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದದ ಪತ್ರ ಕಾನೂನಿನ ಮಾನ್ಯತೆ ಕಳೆದುಕೊಂಡು ಅಸಿಂಧುವಾಗಿದೆ. ಸಂಘದ ಕೆಲವರು ಚಿತಾವಣೆ ನಡೆಸಿ ನಕಲಿ ಛಾಪಾ ಕಾಗದಗಳನ್ನು ರಾಜಾರೋಷವಾಗಿ ಮುದ್ರಿಸಿ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ದಾರೆ. ನಿರ್ದಿಷ್ಟ ಉದ್ದೇಶಗಳಿಗಾಗಿ ಫ್ರಾಂಕಿಂಗ್ ಯಂತ್ರ ಬಳಸಲು ಅಧಿಕಾರ ಹೊಂದಿರುವ ಸಂಘ, ಕರ್ನಾಟಕ ಸ್ಟ್ಯಾಂಪ್ ನಿಯಮಗಳು 2002ರಡಿ ನೀಡಲಾದ ತನ್ನ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿ, ರಾಜಾರೋಷವಾಗಿ ಛಾಪಾ ಕಾಗದಗಳನ್ನು ಮುದ್ರಿಸಿ ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಕರ್ನಾಟಕ ಸ್ಟ್ಯಾಂಪ್ ಕಾಯ್ದೆ 1957 ರ ಸೆಕ್ಷನ್ 10ಎ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಪ್ರತಿಯೊಂದು ಉಪಕರಣಗಳಿಗೆ ಪ್ರತ್ಯೇಕ ಕೆ2 ಚಲನ್ ಗಳನ್ನು ಕಡ್ಡಾಯಗೊಳಿಸಿದ್ದು, ಈ ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೇ ನಕಲಿ ಮಾಡುವ ಮೂಲಕ ಲೂಟಿ ಮಾಡಿದೆ ಎಂದರು.

ಈ ಎಲ್ಲಾ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಸಂಘದವರು ಸಾರ್ವಜನಿಕ ಹಿತಾಸಕ್ತಿಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ. ನಕಲಿ ಛಾಪಾ ಕಾಗದ ಮುದ್ರಣ ಮಾಡುವ ದಂಧೆಯನ್ನು ವ್ಯಾಪಕವಾಗಿ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಪೊಲೀಸ್ ಠಾಣೆಯಲ್ಲಿ 2022 ರ ಡಿಸೆಂಬರ್ 10 ರಂದು ಮೊದಲ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದಿದ್ದು, ಇದೊಂದು ದೊಡ್ಡ ಜಾಲ ಎಂದು ಆಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ನೋಂದಣಿ ಇಲಾಖೆ ಎಚ್ಚೆತ್ತುಕೊಳ್ಳಲೇ ಇಲ್ಲ ಎಂದು ಆರ್. ಈಶ್ವರ ರಾಜು ಆರೋಪಿಸಿದರು.

ವಿಪರ್ಯಾಸವೆಂದರೆ ಸಂಘದ ಕೆಲ ಪ್ರತಿನಿಧಿಗಳು ಕೂಡ ಮೈಸೂರಿನಲ್ಲಿ ನಕಲಿ ಛಾಪಾ ಕಾಗದ ಮುದ್ರಣವಾಗುತ್ತಿರುವ ಕುರಿತು ಸಂಘದ ಅಧ್ಯಕ್ಷರ ಗಮನಕ್ಕೆ ನೇರವಾಗಿ ತಂದಿದ್ದರು. ಆಗ ನಕಲಿ ಛಾಪಾ ಕಾಗದಗಳನ್ನು ಹಿಂದಕ್ಕೆ ಪಡೆದು ಅಸಲಿ ಛಾಪಾ ಕಾಗದಗಳನ್ನು ಪೂರೈಸಲಾಗಿತ್ತು. ಈ ಎಲ್ಲವೂ ಸಂಘ ಮತ್ತು ಸಂಘದ ಸದಸ್ಯರ ನಡುವಿನ ಪತ್ರ ವ್ಯವಹಾರದಲ್ಲಿ ಸ್ಪಷ್ಟವಾಗಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ನಿಯಮಗಳನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡಲಾಗಿದೆ. ನೂರು ವರ್ಷಗಳನ್ನು ಪೂರೈಸಿರುವ ಸಂಘದ ಚಟುವಟಿಕೆಗಳಲ್ಲೂ ಇದೇ ಮೊದಲ ಬಾರಿಗೆ ಅಕ್ರಮ ಕಂಡು ಬಂದಿದೆ. ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂಬ ಆರೋಪಗಳಿವೆ. ಆಡಳಿತಾಧಿಕಾರಿಯನ್ನು ನೇಮಿಸಿದರೆ ಸತ್ಯ ಸಂಗತಿ ಬಯಲಿಗೆ ಬರಲಿದೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ