ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ನಡುವೆ ಭುಗಿಲೆದ್ದಿರುವ ಕಾವೇರಿ ನೀರು ಹಂಚಿಕೆ ವಿವಾದದ ತುರ್ತು ವಿಚಾರಣೆಗೆ ಅಸ್ತು ಎಂದಿರುವ ಸುಪ್ರೀಕೋರ್ಟ್, ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸಲಾಗುವುದು, ಅಲ್ಲಿ ಎಲ್ಲ ವಿಚಾರಣೆ ನಡೆಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂನಲ್ಲಿ ಮನವಿ ಮಾಡಿತ್ತು. ವಿಚಾರಣೆಗೆ ಒಪ್ಪಿಗೆ ನೀಡಿಡುರುವ ಸಿಜೆಐ, ವಿಚಾರಣೆ ನಡೆಸಲು ಪ್ರತ್ಯೇಕ ಪೀಠ ರಚಿಸುವ ಭರವಸೆ ನೀಡಿದ್ದಾರೆ. ಕಾವೇರಿ ನೀರಿನ ಸಂಬಂಧ ಕರ್ನಾಟಕದಿಂದಲೂ ಅರ್ಜಿ ಸಲ್ಲಿಸಿರುವ ಬಗ್ಗೆ ಪ್ರಸ್ತಾಪವಾಗಿದ್ದು, ‘ಪ್ರತ್ಯೇಕ ಪೀಠ ರಚಿಸಲಾಗುವುದು, ಅಲ್ಲಿ ಎಲ್ಲ ವಿಚಾರಣೆ ನಡೆಯಲಿ’ ಎಂದರು.
ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ:
ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ರಾಜ್ಯದಿಂದ ನಿತ್ಯ 10,000 ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ ನೀರು ಹರಿಸಬೇಕು ಎಂದು ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಬಗ್ಗೆ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ತೆಗೆದಿರುವ ತಗಾದೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಮೊರೆ ಹೋಗಲಿದೆ. ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮನವಿ ಸಾಧಕ-ಬಾಧಕ, ರಾಜ್ಯದ ಮನವಿ ಸ್ವರೂಪದ ಕುರಿತು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.