KRGRV
Sunday, December 22, 2024
Homeರಾಜಕೀಯಅಡ್ಜಸ್ಟ್‌ಮೆಂಟ್‌ ರಾಜಕೀಯ ಸೇಡಿನ ರಾಜಕೀಯವಾಗಿ ಬದಲಾಗ್ತಿದೆಯಾ..?

ಅಡ್ಜಸ್ಟ್‌ಮೆಂಟ್‌ ರಾಜಕೀಯ ಸೇಡಿನ ರಾಜಕೀಯವಾಗಿ ಬದಲಾಗ್ತಿದೆಯಾ..?

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಆರೇಳು ತಿಂಗಳಾದ ಮೇಲೆ ಆಗ ಶಾಸಕರಾಗಿದ್ದ ಕುಮಾರಸ್ವಾಮಿಯವರು ಒಂದು ಪೆನ್‌ಡ್ರೈವ್‌ ಪ್ರದರ್ಶನ ಮಾಡಿದ್ದರು.. ರಾಜ್ಯ ಸರ್ಕಾರದ ಸಚಿವರ ಭ್ರಷ್ಟಾಚಾರದ ಸಾಕ್ಷಿಗಳು ಇದರಲ್ಲಿವೆ ಎಂದು ಹೇಳಿದ್ದರು..

ಆದ್ರೆ ಅದನ್ನು ಇದುವರೆಗೂ ಹೊರಗೆ ತರಲೇ ಇಲ್ಲ.. ಲೋಕಸಭಾ ಚುನಾವಣೆಗೂ ಮುಂದೆ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾಗಿತ್ತು.. ಪೋಕ್ಸೋ ಕಾಯ್ದೆಯಡಿ ಕೇಸ್‌ ದಾಖಲಾದರೆ ಸಾಮಾನ್ಯವಾಗಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತದೆ.. ಆದ್ರೆ ಆ ಸಂದರ್ಭದಲ್ಲಿ ಸಿಐಡಿ ತನಿಖೆ ಹೆಸರಲ್ಲಿ ಯಡಿಯೂರಪ್ಪರ ಮೇಲೆ ಕ್ರಮ ಆಗಲಿಲ್ಲ.. ಇದಾಗಿ ಲೋಕಸಭಾ ಚುನಾವಣೆ ಮುಗಿದಿದೆ.. ಈಗ ಪರಿಸ್ಥಿತಿ ಬದಲಾಗಿದೆ..

ಲೋಕಸಭಾ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ವಿರುದ್ಧದ ಕೇಸ್‌ನ್ನು ಆಚೆಗೆ ತರಲಾಯಿತು.. ಅವರು ಬಂಧನವಾಗುವ ಹಂತಕ್ಕೂ ಹೋಗಿತ್ತು.. ಆದ್ರೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದರಿಂದ ಅವರು ಬಚಾವಾದರು.. ಇನ್ನು ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ರೇವಣ್ಣ ಅವರು ಬಂಧನವಾದ ಪ್ರಕರಣಗಳೂ ಎಲ್ಲರಿಗೂ ಗೊತ್ತಿದೆ.. ಇದೆಲ್ಲದರ ನಡುವೆ ಈಗ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣ ವಿಚಾರ ಈಗ ಹೆಚ್ಚು ಸದ್ದು ಮಾಡುತ್ತಿದೆ..

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಗೆ ರಾಜ್ಯಪಾಲರು ಅನುಮತಿ ಕೂಡಾ ನೀಡಿದ್ದಾರೆ.. ಇದೀಗ ರಾಜಕೀಯ ಮೇಲಾಟ ಶುರುವಾಗಿದೆ.. ಒಂದು ಕಡೆ, ಸಿದ್ದರಾಮಯ್ಯ ಅವರು ನಾನು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ.. ರಾಜ್ಯಪಾಲರು ರಾಜಕೀಯ ಷಡ್ಯಂತ್ರದ ಫಲವಾಗಿ ಈ ಆದೇಶ ನೀಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪ ಮಾಡುತ್ತಿದ್ದಾರೆ.. ಈ ನಡುವೆ ಅವರವೂ ಸಾಕಷ್ಟಿವೆ ಅವನ್ನೂ ಹೊರಗೆ ತರುತ್ತೇವೆ ಎಂದು ಹೇಳುತ್ತಿದ್ದಾರೆ..

ಮೈಸೂರಿನಲ್ಲಿ ಜನಾಂದೋಲನ ಸಭೆ ನಡೆಸಿದ ಬಳಿಕ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಜೆಡಿಎಸ್‌, ಬಿಜೆಪಿ ನಾಯಕರ ವಿರುದ್ಧವೂ ಹಲವಾರು ಅರೋಪಗಳಿವೆ.. ಅವರ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿವೆ.. ತನಿಖೆ ನಡೆಯುತ್ತಿದೆ.. ವರದಿ ಬಂದ ತಕ್ಷಣ ಅವರ ವಿರುದ್ಧವೂ ಕ್ರಮ ಆಗುತ್ತದೆ.. ಇಷ್ಟು ದಿನ ಸುಮ್ಮನಿದ್ದೆ. ಇನ್ನು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದರು..

ಪರಮೇಶ್ವರ್‌ ಕೂಡಾ ಇದೇ ರೀತಿಯ ಮಾತು;

ಇನ್ನು ಗೃಹ ಪರಮೇಶ್ವರ್‌ ಅವರು ಕೂಡಾ ಭಾನುವಾರ ಮಾತನಾಡುತ್ತಾ, ನಿರಾಣಿ, ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ವಿರುದ್ಧವೂ ರಾಜ್ಯಪಾಲರ ಬಳಿ ದೂರುಗಳಿವೆ.. ಅವುಗಳ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.. ಈಗ ನಾವೂ ಅವುಗಳನ್ನು ಹೊರಗೆ ತರುತ್ತೇವೆ.. ಆ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಪೆನ್‌ಡ್ರೈವ್‌ ಅಸ್ತ್ರ;

ಇನ್ನು ಕುಮಾರಸ್ವಾಮಿಯವರು ಶಾಸಕರಾಗಿದ್ದಾಗ ಅಂದರೆ ಏಳೆಂಟು ತಿಂಗಳ ಹಿಂದೆ ಕಾಂಗ್ರೆಸ್‌ ಸರ್ಕಾರದ ಸಚಿವರ ಭ್ರಷ್ಟಾಚಾರದ ಸಾಕ್ಷ್ಯಗಳು ನನ್ನ ಬಳಿ ಇವೆ ಎಂದು ಪೆನ್‌ಡ್ರೈವ್‌ ತೋರಿಸಿದ್ದರು.. ಆದ್ರೆ ಅದರಲ್ಲಿದ್ದ ವಿಚಾರ ಮಾತ್ರ ಹೊರಗೆ ನೀಡಿಲ್ಲ.. ಈಗಲೂ ಅದನ್ನು ಗುಪ್ತವಾಗಿಯೇ ಇಟ್ಟಿದ್ದಾರೆ.. ಟೈಮ್‌ ಬರಲಿ ಆವಾಗ ಹೊರಬರುತ್ತೆ ಎಂದು ಹೇಳುತ್ತಿದ್ದಾರೆ..

ಹೀಗೆ ನಾಯಕರು ಆರೋಪಿಗಳನ್ನು ಮಾಡುತ್ತಿದ್ದಾರೆ.. ಸಾಕ್ಷ್ಯಗಳಿವೆ ಎಂದು ಹೇಳುತ್ತಿದ್ದಾರೆ.. ಆದ್ರೆ ಅವನ್ನು ಬಹಿರಂಗ ಮಾಡುತ್ತಿಲ್ಲ.. ಇನ್ನೊಂದೆಡೆ ಅವರ ಭ್ರಷ್ಟಾಚಾರಗಳು ನಮಗೆ ಗೊತ್ತಿವೆ ಎಂದು ಹೇಳುತ್ತಿದ್ದಾರೆ.. ಆದ್ರೆ ಅಂತಹವರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ.. ಇದೆಲ್ಲದರ ನಡುವೆ ಮಾಜಿ ಸಂಸದ ಪ್ರತಾಪ ಸಿಂಹರಂತಹವರು ಅಡ್ಜಸ್ಟ್‌ಮೆಂಟ್‌ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ..
ಅಂದರೆ, ಬೇರೆಯವರ ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದರೂ, ಅದರ ಮಾಹಿತಿ ಇದ್ದರೂ ಅದನ್ನು ಹಾಗೆಯೇ ಇಟ್ಟುಕೊಳ್ಳಬಹುದೇ..?, ಅಧಿಕಾರ ಬಂದಾಗಲೂ ತನಿಖೆ ಮಾಡದೇ ಸುಮ್ಮನೆ ಬಿಡಬಹುದೇ..?, ತಪ್ಪು ಮಾಡಿರುವುದು ಗೊತ್ತಿದ್ದೂ ಸುಮ್ಮನಿರುವುದು ಅಪರಾಧವಲ್ಲವೇ..? ಸಾರ್ವಜನಿಕರು ಹೀಗೆ ಮಾಡಿದರೆ ಅವರ ವಿರುದ್ಧ ಕ್ರಮ ಆಗುತ್ತದೆ.. ಆದ್ರೆ ರಾಜಕಾರಣಿಗಳ ವಿರುದ್ಧ ಯಾಕೆ ಕ್ರಮ ಆಗೋಲ್ಲ ಎಂಬ ಪ್ರಶ್ನೆ ಮೂಡುತ್ತದೆ..

ಹೆಚ್ಚಿನ ಸುದ್ದಿ