
ಸಂವಿಧಾನ ದತ್ತವಾಗಿ ಉತ್ತಮ ಗಾಳಿ ಹಾಗೂ ಪರಿಸರವನ್ನು ಕಲ್ಪಿಸಿಕೊಡುವುದು ಸಹ ನಮ್ಮ ಮೂಲಭೂತ ಹಕ್ಕಾಗಿದೆ. ಇಂಥ ಸಂದರ್ಭದಲ್ಲಿ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಉತ್ತಮ ಗಾಳಿ, ನೀರು, ಬೆಳಕು ದೊರೆಯಲು ಅರಣ್ಯ ಉಳಿಸಬೇಕಾಗಿದೆ.ಅಂತಾರಾಷ್ಟ್ರೀಯ ಅರಣ್ಯ ದಿನವಾದ ಇಂದು ಅಂತರ್ಜಲ ವೃದ್ಧಿ ಹಾಗೂ ಉತ್ತಮ ಮಳೆಗಾಗಿ ನಾವು ಕಾಡು, ಬೆಟ್ಟ-ಗುಡ್ಡಗಳ ಸಂರಕ್ಷಣೆ ಮಾಡುವುದು ಅತ್ಯಗತ್ಯ ವಾಗಿದೆ.
ಅರಣ್ಯದ ಮಹತ್ವವನ್ನು ಅರಿಯಲು ಈ ದಿನ ಹೊಸತನಕ್ಕೊಂದು ದಾರಿ ಮಾಡಿಕೊಟ್ಟಿದೆ. ಅದರಲ್ಲೂ ವಿಶೇಷವಾಗಿ ಕಾರ್ಬನ್ ಅಂಶ ತಗ್ಗಿಸುವ ಕ್ರಮವಾಗಿಯೂ ಅರಣ್ಯದ ಮಹತ್ವ ತಿಳಿಯಲಾಗುತ್ತಿದೆ. ಅರಣ್ಯವೆಂದರೆ ಅದು ಸಸ್ಯ ಸಂಪತ್ತು. ಸಾವಿರಾರು ಜಾತಿ ಮರಗಳು ಪ್ರಾಕೃತಿಕವಾಗಿ ಬೆಳೆದು ಲಕ್ಷಾಂತರ ಜೀವವೈವಿಧ್ಯ ಸೂಕ್ಷ್ಮಾಣುಗಳೊಂದಿಗೆ ರೂಪುಗೊಂಡಿರುವ ಪ್ರಕೃತಿಯ ಒಂದು ಸುಂದರ ತಾಣ.ಅಂತಾರಾಷ್ಟ್ರೀಯ ಅರಣ್ಯ ದಿನವಾದ ಇಂದು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರು ಪರಿಸರ ಪ್ರೇಮ ಬೆಳೆಸಿಕೊಳ್ಳುವ ಮೂಲಕ ನಮ್ಮ ಸುತ್ತಮುತ್ತಲಿನಲ್ಲಿ ಮರಗಿಡಗಳನ್ನು ಪೋಷಣೆ ಮಾಡಬೇಕು ಅರಣ್ಯ ರಕ್ಷಣೆಗೆ ಮುಂದಾಗಬೇಕು ಆಗ ಈ ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆಗೆ ಒಂದು ಅರ್ಥ ಬರಲಿದೆ.
