KRGRV
Monday, October 12, 2026
Homeರಾಜಕೀಯಈಶಾನ್ಯ ಶಿಕ್ಷಕರ ಮತಕ್ಷೇತ್ರ: ವಿಧಾನ ಪರಿಷತ್ ಚುನಾವಣೆಗೆ ರಾಜು ದೇವಪ್ಪ ಸೂನ್ನ ಸ್ಪರ್ಧೆ — ಶಿಕ್ಷಕರ...

ಈಶಾನ್ಯ ಶಿಕ್ಷಕರ ಮತಕ್ಷೇತ್ರ: ವಿಧಾನ ಪರಿಷತ್ ಚುನಾವಣೆಗೆ ರಾಜು ದೇವಪ್ಪ ಸೂನ್ನ ಸ್ಪರ್ಧೆ — ಶಿಕ್ಷಕರ ಬೆಂಬಲಕ್ಕೆ ಮನವಿ

ಕಲಬುರಗಿ / ಈಶಾನ್ಯ ವಲಯ:
ಕರ್ನಾಟಕ ರಾಜ್ಯ ವಿಧಾನ ಪರಿಷತ್ ಚುನಾವಣೆಯ ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ರಾಜು ದೇವಪ್ಪ ಸೂನ್ನ (ಎಂ.ಎ) ಅವರು ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಅಕ್ಟೋಬರ್ 23, 2026 ರಂದು ಚುನಾವಣೆ ನಡೆಯಲಿದ್ದು, ಶಿಕ್ಷಕ ಮತದಾರರ ಬೆಂಬಲ ಕೋರಿ ಅವರು ವಿವಿಧೆಡೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜು ದೇವಪ್ಪ ಸೂನ್ನ ಅವರು, ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಹಕ್ಕುಗಳ ರಕ್ಷಣೆ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಪರಿಹಾರಕ್ಕಾಗಿ ವಿಧಾನ ಪರಿಷತ್‌ನಲ್ಲಿ ಪರಿಣಾಮಕಾರಿಯಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಅವರ ಪ್ರಮುಖ ಬೇಡಿಕೆಗಳು ಮತ್ತು ಆದ್ಯತೆಗಳು:

371(ಜೆ) ಸಮರ್ಪಕ ಅನುಷ್ಠಾನ:
ಸಂವಿಧಾನದ 371(ಜೆ) ವಿಧಿಯಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರೆತಿರುವ ಉದ್ಯೋಗ ಹಾಗೂ ಶಿಕ್ಷಣ ಮೀಸಲಾತಿ ಸೌಲಭ್ಯಗಳನ್ನು ಸಂಪೂರ್ಣವಾಗಿ ಮತ್ತು ನ್ಯಾಯಯುತವಾಗಿ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.

ಬಡ್ತಿ ವಿಚಾರದಲ್ಲಿ ಅನ್ಯಾಯಕ್ಕೆ ಮುಕ್ತಿ:
ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಬಡ್ತಿ (Promotion) ವಿಚಾರದಲ್ಲಿ ಎದುರಾಗುತ್ತಿರುವ ತಾರತಮ್ಯಗಳನ್ನು ನಿವಾರಿಸಲು ಹೋರಾಟ ನಡೆಸುವುದಾಗಿ ಹೇಳಿದರು.

ಕೋಲಿ-ಬೆಸ್ತ-ನಿಷಾದ ಸಮಾಜ ಹಾಗೂ ಶ್ರಮಿಕ ವರ್ಗದ ಪರ ಧ್ವನಿ:
ಈ ಭಾಗದ ಕೋಲಿ, ಬೆಸ್ತ, ನಿಷಾದ ಹಾಗೂ ಕಬ್ಬಿಲಿಗ ಸಮಾಜ ಸೇರಿದಂತೆ ಶ್ರಮಿಕ ವರ್ಗದ ಶಿಕ್ಷಕ ಮತದಾರರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗಾಗಿ ವಿಧಾನ ಪರಿಷತ್‌ನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ರಾಜು ದೇವಪ್ಪ ಸೂನ್ನ ತಿಳಿಸಿದರು.

“ನಿಮ್ಮ ಮನೆಯ ಮಗನಾಗಿ ಶಿಕ್ಷಕರ ಸಮಸ್ಯೆಗಳು ಹಾಗೂ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸಲು ಬದ್ಧನಾಗಿದ್ದೇನೆ. ಆದ್ದರಿಂದ ಪ್ರಜ್ಞಾವಂತ ಶಿಕ್ಷಕ ಬಾಂಧವರು ಕ್ರಮ ಸಂಖ್ಯೆ 09ರಲ್ಲಿರುವ ನನಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು” ಎಂದು ಅವರು ಮನವಿ ಮಾಡಿದರು.

ರಾಜು ದೇವಪ್ಪ ಸೂನ್ನ ಅವರ ಚುನಾವಣಾ ಪ್ರಚಾರಕ್ಕೆ ಸ್ಥಳೀಯ ಶಿಕ್ಷಕರ ಬಳಗ, ಕೋಲಿ-ಬೆಸ್ತ-ನಿಷಾದ ಸಮಾಜದ ಮುಖಂಡರು ಹಾಗೂ ವಿವಿಧ ವರ್ಗಗಳ ಬೆಂಬಲಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ