KRGRV
Saturday, August 29, 2026
Homeಜಿಲ್ಲಾ ಸುದ್ದಿಗಳುಕಲಬುರ್ಗಿ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಲು ಆಗ್ರಹ: ತಪ್ಪಿದ್ದಲ್ಲಿ ಅಫಜಲಪೂರ ಬಂದ್ ಎಚ್ಚರಿಕೆ - ಮಾಂತೇಶ್...

ಕಲಬುರ್ಗಿ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಲು ಆಗ್ರಹ: ತಪ್ಪಿದ್ದಲ್ಲಿ ಅಫಜಲಪೂರ ಬಂದ್ ಎಚ್ಚರಿಕೆ – ಮಾಂತೇಶ್ ಎಸ್ ಜಮಾದಾರ್

ಕಲಬುರ್ಗಿ:
ರಾಜ್ಯ ಸರ್ಕಾರ ಘೋಷಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕಲಬುರ್ಗಿ ಜಿಲ್ಲೆಯನ್ನು ಕೈಬಿಟ್ಟಿರುವುದನ್ನು ಖಂಡಿಸಿ, ಜಿಲ್ಲೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ಕೊರತೆಯಿಂದ ಕಂಗೆಟ್ಟಿರುವ ಅನ್ನದಾತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಮಾಂತೇಶ್ ಎಸ್ ಜಮಾದಾರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರ್ಗಿ ಜಿಲ್ಲೆಯಲ್ಲಿ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿದ್ದು, ಬಿತ್ತಿದ ಬೆಳೆಗಳು ಒಣಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಿದ್ದರೂ, ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ 101 ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕಲಬುರ್ಗಿ ಜಿಲ್ಲೆಯನ್ನು ಹೊರಗಿಟ್ಟಿರುವುದು ರೈತರಿಗೆ ಎಸಗಿರುವ ದೊಡ್ಡ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ, ಕೂಡಲೇ ಕಲಬುರ್ಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಹಾಗೂ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಈ ಹಿಂದೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಸರ್ಕಾರದ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮೀಕ್ಷೆ ನಡೆಸಿ ಕಲಬುರ್ಗಿ ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ವಿವಿಧ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಮತ್ತು ಮುಂಬರುವ ದಿನಗಳಲ್ಲಿ ಅಫಜಲಪೂರ ಬಂದ್ ಘೋಷಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಂತೇಶ್ ಎಸ್ ಜಮಾದಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ