KRGRV
Thursday, October 1, 2026
Homeಬೆಂಗಳೂರುಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಾಸ್ಟೆಲ್, ಆಶ್ರಮ ಶಾಲೆ, ಮೊರಾರ್ಜಿ ವಸತಿ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನ

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಾಸ್ಟೆಲ್, ಆಶ್ರಮ ಶಾಲೆ, ಮೊರಾರ್ಜಿ ವಸತಿ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನ

ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ, ಶಿಸ್ತು ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ಸಚಿವ ಶಿವರಾಜ್ ತಂಗಡಗಿ ಸೂಚನೆ

ಬೆಂಗಳೂರು: ಅ.1: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಹಾಸ್ಟೆಲ್‌ಗಳು, ಆಶ್ರಮ ಶಾಲೆಗಳು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗಾಂಧೀಜಿಯವರ ಸ್ವಚ್ಛತೆ ಕುರಿತ ಚಿಂತನೆ ಹಾಗೂ ಸ್ವಚ್ಛ ಪರಿಸರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲು ಸಚಿವರು ನಿರ್ದೇಶನ ನೀಡಿದ್ದು, ಈ ಸಂಬಂಧ ಆದೇಶ ಕೊಡ ಹೊರಡಿಸಲಾಗಿದೆ.

ಒಂದು ದಿನಕ್ಕೆ ಸ್ವಚ್ಛತೆ ಅಭಿಯಾನ ಸೀಮಿತವಾಗದಿರಲಿ;
ಹಾಸ್ಟೆಲ್‌ಗಳು, ಆಶ್ರಮ ಶಾಲೆಗಳು ಮತ್ತು ಮೊರಾರ್ಜಿ ವಸತಿ ಶಾಲೆಗಳ ಆವರಣ, ತರಗತಿ ಕೊಠಡಿಗಳು, ವಸತಿ ಕೊಠಡಿಗಳು, ಅಡುಗೆಮನೆ, ಊಟದ ಸ್ಥಳ, ಶೌಚಾಲಯಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ, ವಿದ್ಯಾರ್ಥಿಗಳನ್ನೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುವುದು.
ಸ್ವಚ್ಛತೆ ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ವೈಯಕ್ತಿಕ ಸ್ವಚ್ಛತೆ, ಪರಿಸರ ಸ್ವಚ್ಛತೆ, ತ್ಯಾಜ್ಯ ವಿಂಗಡಣೆ, ಸ್ವಚ್ಛತಾ ಅಭ್ಯಾಸ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಷ್ಟೇ ಸ್ವಚ್ಛತೆಗೂ ಮಹತ್ವ ನೀಡಿದ್ದರು. ಸ್ವಚ್ಛ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನೂ ತನ್ನದೇ ಆದ ಕೊಡುಗೆ ನೀಡಬೇಕು ಎಂಬ ಅವರ ಆಶಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ಎಲ್ಲೆಡೆ ಸ್ವಚ್ಛತೆ ಕೊಂಡೊಯ್ಯುವ ಅಗತ್ಯವಿದೆ;
ವಿದ್ಯಾರ್ಥಿಗಳು ಸ್ವಚ್ಛತೆಯ ಮಹತ್ವವನ್ನು ಅರಿತು ತಮ್ಮ ವಸತಿ ನಿಲಯ ಹಾಗೂ ಶಾಲಾ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ, ತಮ್ಮ ಮನೆ, ಗ್ರಾಮ ಹಾಗೂ ಸಮಾಜದಲ್ಲಿಯೂ ಸ್ವಚ್ಛತೆಯ ಸಂದೇಶವನ್ನು ಕೊಂಡೊಯ್ಯುವಂತೆ ಪ್ರೋತ್ಸಾಹಿಸಲಾಗುವುದು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೇವಲ ಕಾರ್ಯಕ್ರಮದ ರೂಪದಲ್ಲಿ ನಡೆಸದೆ, ನಿರಂತರ ಸ್ವಚ್ಛತಾ ಅಭ್ಯಾಸವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಶಿವರಾಜ್ ತಂಗಡಗಿ ಸಲಹೆ ನೀಡಿದ್ದಾರೆ.

ಹೆಚ್ಚಿನ ಸುದ್ದಿ