ಬೆಂಗಳೂರು, ಅ.15: ಕರ್ನಾಟಕವನ್ನು ಜಾಗತಿಕ ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ರೂಪಿಸುವ ಮಹತ್ವದ ಹೆಜ್ಜೆಯಾಗಿ, ಜಾಗತಿಕ ಖ್ಯಾತಿಯ ಲಿವರ್ಪೂಲ್ ವಿಶ್ವವಿದ್ಯಾಲಯವು ಬೆಂಗಳೂರಿನ ವೈಟ್ಫೀಲ್ಡ್ನ ಅಲೆಂಬಿಕ್ ಸಿಟಿಯಲ್ಲಿ ತನ್ನ ದಕ್ಷಿಣ ಭಾರತದ ಮೊದಲ ಕ್ಯಾಂಪಸ್ ಅನ್ನು ಗುರುವಾರ ಅಧಿಕೃತವಾಗಿ ಆರಂಭಿಸಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಲಿವರ್ಪೂಲ್ ವಿಶ್ವವಿದ್ಯಾಲಯದ ಕುಲಪತಿ ಟಿಮ್ ಜೋನ್ಸ್, ಲಿವರ್ಪೂಲ್ ನಗರದ ಮೇಯರ್ ಸ್ಟೀವ್ ರೋದರ್ಹ್ಯಾಂ, ಕರ್ನಾಟಕದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಹರ್ಷವೀರ್ ಸಂಘಾ ಹಾಗೂ ಬ್ರಿಟಿಷ್ ಕೌನ್ಸಿಲ್ ಇಂಡಿಯಾದ ಕಂಟ್ರಿ ಡೈರೆಕ್ಟರ್ ಆಲಿಸನ್ ಬಾರೆಟ್ ಅವರು ನೂತನ ಕ್ಯಾಂಪಸ್ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, 2024ರ ನವೆಂಬರ್ನಲ್ಲಿ ಲಂಡನ್ನಲ್ಲಿ ರಾಜ್ಯದ ಪರವಾಗಿ ನಡೆಸಿದ ರೋಡ್ಶೋ ವೇಳೆ ರಸೆಲ್ ಗ್ರೂಪ್ ವಿಶ್ವವಿದ್ಯಾಲಯಗಳೊಂದಿಗೆ ನಡೆದ ಮಾತುಕತೆಯ ಫಲವಾಗಿ ಕೇವಲ ಎರಡು ವರ್ಷಗಳಲ್ಲೇ ಈ ಕ್ಯಾಂಪಸ್ ಆರಂಭವಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಕ್ಯಾಂಪಸ್ನಿಂದ ಕರ್ನಾಟಕದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳದೆ ರಾಜ್ಯದಲ್ಲಿಯೇ ವಿಶ್ವಮಟ್ಟದ ಶಿಕ್ಷಣ ಪಡೆದು ಅಂತರರಾಷ್ಟ್ರೀಯ ಗುಣಮಟ್ಟದ ಪದವಿ ಗಳಿಸಲು ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 27 ಲಕ್ಷ ವಿದ್ಯಾರ್ಥಿಗಳು, 4,500 ಕಾಲೇಜುಗಳು ಹಾಗೂ ಪ್ರತಿ ವರ್ಷ 1.6 ಲಕ್ಷ ಎಂಜಿನಿಯರಿಂಗ್ ಪದವೀಧರರು ಹೊರಬರುತ್ತಿದ್ದಾರೆ. ಜೊತೆಗೆ 24 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಮತ್ತು 50ಕ್ಕೂ ಅಧಿಕ ಯೂನಿಕಾರ್ನ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಲಿವರ್ಪೂಲ್ ವಿಶ್ವವಿದ್ಯಾಲಯವು ಇವುಗಳೊಂದಿಗೆ ಸಂಶೋಧನೆ ಮತ್ತು ನಾವೀನ್ಯತೆಯ ಸಹಭಾಗಿತ್ವ ಬೆಳೆಸಬೇಕು ಎಂದು ಪಾಟೀಲ ಆಶಿಸಿದರು.
ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಆಧುನಿಕ ತಯಾರಿಕೆ, ಶುದ್ಧ ಇಂಧನ, ನಗರ ನಾವೀನ್ಯತೆ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕರ್ನಾಟಕ ಉತ್ತಮ ಅವಕಾಶಗಳನ್ನು ಹೊಂದಿದ್ದು, ಈ ಕ್ಯಾಂಪಸ್ ಶಿಕ್ಷಣ ಮತ್ತು ಕೈಗಾರಿಕೆಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 14ಕ್ಕೂ ಹೆಚ್ಚು ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಅವುಗಳ ಕ್ಯಾಂಪಸ್ಗಳು ಮತ್ತು ಸಂಶೋಧನಾ ಕೇಂದ್ರಗಳು ಶೀಘ್ರದಲ್ಲೇ ಕ್ವಿನ್ ಸಿಟಿ ಯೋಜನೆಯಲ್ಲಿ ಕಾರ್ಯಾರಂಭ ಮಾಡಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

