KRGRV
Wednesday, February 4, 2026
Homeರಾಜ್ಯದಲಿತರ ಹಣ ದುರ್ಬಳಕೆ ವಿರುದ್ಧ ಹೋರಾಟ- ಛಲವಾದಿ ನಾರಾಯಣಸ್ವಾಮಿ

ದಲಿತರ ಹಣ ದುರ್ಬಳಕೆ ವಿರುದ್ಧ ಹೋರಾಟ- ಛಲವಾದಿ ನಾರಾಯಣಸ್ವಾಮಿ

ದಲಿತರು ಈ ಕಾಂಗ್ರೆಸ್ಸಿನ ವ್ಯವಸ್ಥೆ ವಿರುದ್ಧ ಸೆಟೆದು ನಿಂತಿದ್ದಾರೆ

ಬೆಂಗಳೂರು: ‘ಎಸ್‍ಸಿಎಸ್‍ಪಿ- ಟಿಎಸ್‍ಪಿ’ ಯೋಜನೆಯ ಸಾವಿರಾರು ಕೋಟಿ ರೂ ದುರ್ಬಳಕೆ ವಿರುದ್ಧ ದಲಿತರ ಪರವಾಗಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ವಿಧಾನ ಸೌಧದ ಆವರಣ ಎರಡನೇ ಕಟ್ಟಡದ ಶಾಸಕರ ಭವನ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಎಸ್‍ಸಿಎಸ್‍ಪಿ- ಟಿಎಸ್‍ಪಿ’ ಯೋಜನೆಯ ಸಾವಿರಾರು ಕೋಟಿ ರೂ ದುರ್ಬಳಕೆ ಸಂಬಂಧ ದಲಿತ ಸಂಘಟನೆಗಳ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ದಲಿತ ಸಂಘಟನೆಗಳು ಮತ್ತು ನಾವು ಸೇರಿ ಈ ಹೋರಾಟ ಮುಂದುವರೆಸುತ್ತೇವೆ ಎಂದು ಅವರು ಪ್ರಕಟಿಸಿದರು. ಇದು ಸಮುದಾಯದ ವಿಷಯ. ಇದರಲ್ಲಿ ರಾಜಕೀಯ ಇಲ್ಲ ಎಂದ ಅವರು, ಆ ಕಾರಣದಿಂದ ವೆಂಕಟಸ್ವಾಮಿ, ಪಿ.ಮೂರ್ತಿ, ರಾಜಗೋಪಾಲ್, ರಘು, ಬಾಲಕೃಷ್ಣ ಸೇರಿ ಸುಮಾರು 80ರಿಂದ 90 ಸಂಘಟನೆಗಳು ಬಂದಿವೆ ಎಂದು ಅವರು ವಿವರಿಸಿದರು.
ದಲಿತ ಸಮುದಾಯಗಳ ಉದ್ಧಾರಕ್ಕಾಗಿ ಆಸ್ತಿಗೆ ಹೂಡಿಕೆ ಮಾಡುವುದು, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡುವುದು, ಶಾಲೆಗಳನ್ನು ತೆರೆಯಬೇಕಿತ್ತು. ಅಗತ್ಯ ಹಾಸ್ಟೆಲ್‍ಗಳನ್ನು ತೆರೆಯುವ ಕಾರ್ಯ ಆಗಬೇಕಿತ್ತು. ಅವರಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕಿತ್ತು ಎಂದು ತಿಳಿಸಿದರು. ವಿದ್ಯಾರ್ಥಿಗಳಾಗಿ ಹೊರಕ್ಕೆ ಬಂದವರಿಗೆ ಸ್ವ ಉದ್ಯೋಗ ನೀಡುವ ಕಾರ್ಯವೂ ನಡೆಯಬೇಕು. ಜಾಗ, ಸಾಲ ಕೊಡುವ ಕಾರ್ಯವೂ ನಡೆಯಬೇಕಿದೆ ಎಂದು ವಿವರಿಸಿದರು.
ಚಾಲಕರಿಗೆ ಟ್ಯಾಕ್ಸಿ ಕೊಟ್ಟರೆ ಅವರು ಅದರ ಮೂಲಕ ಜೀವನ ಮಾಡುತ್ತಾರೆ. ಭೂಹೀನರಿಗೆ ಭೂಮಿ ಕೊಡಬೇಕಾಗಿತ್ತು. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಇಟ್ಟಿರುವುದಾಗಿ ಹೇಳುತ್ತಾರೆ. ಅದರಲ್ಲಿ ದಲಿತರಿಗೆ ಪಾಲಿಲ್ಲ ಎನ್ನುತ್ತಾರೆ. ಹಾಗಿದ್ದರೆ ದಲಿತರನ್ನು ಬಿಟ್ಟು ಗ್ಯಾರಂಟಿ ಕೊಡುತ್ತಾರಾ ಅಥವಾ ದಲಿತರೂ ಸೇರಿ ಗ್ಯಾರಂಟಿ ಜಾರಿ ಆಗಿದೆಯೇ ಎಂದು ಪ್ರಶ್ನಿಸಿದರು.
ಕಾಕಾ ಪಾಟೀಲ್‍ಗೂ ಫ್ರೀ, ಮಹದೇವಪ್ಪಗೂ ಫ್ರೀ ಎನ್ನುತ್ತಾರೆ. ಆದರೆ, ದಲಿತರಿಗೆ ಗ್ಯಾರಂಟಿ ಹಣ ಇಲ್ಲ ಎಂದು ವಂಚಿಸುತ್ತಾರೆ. ಆಸ್ತಿ ಮೇಲಿನ ಹೂಡಿಕೆಗೆ ಬೇಕಾದ ಹಣದಲ್ಲೇ ಗ್ಯಾರಂಟಿಗೆ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು. ದಲಿತರು ಈ ಕಾಂಗ್ರೆಸ್ಸಿನ ವ್ಯವಸ್ಥೆ ವಿರುದ್ಧ ಸೆಟೆದು ನಿಂತಿದ್ದಾರೆ ಎಂದು ಅವರು ವಿವರಿಸಿದರು.
ಕೇಂದ್ರದ ಮಾಜಿ ಸಚಿವ ಆನೇಕಲ್ ನಾರಾಯಣಸ್ವಾಮಿ , ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ. ರಾಜೀವ್, ಮಾಜಿ ಸಂಸದ ಮುನಿಸ್ವಾಮಿ, ರಾಜ್ಯ ಬಿಜೆಪಿ ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ್, ಬಿಜೆಪಿಯ ಮುಖಂಡರು, ದಲಿತ ಮುಖಂಡರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ