KRGRV
Tuesday, May 12, 2026
Homeರಾಜ್ಯನೀಟ್ ಮರು ಪರೀಕ್ಷೆ ನಿರ್ಧಾರಕ್ಕೆ ಆಕ್ರೋಶ: ಲಿಂಗಸುಗೂರಿನ ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಭಾರಿ...

ನೀಟ್ ಮರು ಪರೀಕ್ಷೆ ನಿರ್ಧಾರಕ್ಕೆ ಆಕ್ರೋಶ: ಲಿಂಗಸುಗೂರಿನ ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ

ಲಿಂಗಸುಗೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವತಿಯಿಂದ ಮೇ ೦೩ ರಂದು ನಡೆದ ನೀಟ್ ಯುಜಿ-೨೦೨೬ ಪರೀಕ್ಷೆಯನ್ನು ರದ್ದುಗೊಳಿಸಿ, ದೇಶಾದ್ಯಂತ ಮರು ಪರೀಕ್ಷೆ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರ ಹಾಗೂ ಎನ್‌ಟಿಎ ಮಂಡಳಿಯ ನಿರ್ಧಾರವನ್ನು ಖಂಡಿಸಿ ಕರಡಕಲ್-ಲಿಂಗಸುಗೂರಿನ ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಸ್ತೆಗಿಳಿದು ಭಾರಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ, “ವಿದ್ಯಾರ್ಥಿಗಳು ಹಗಲು-ರಾತ್ರಿಯೆನ್ನದೆ ಶ್ರಮಪಟ್ಟು ಪರೀಕ್ಷೆ ಎದುರಿಸಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ, ಎಲ್ಲೋ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನೆಪವಾಗಿಟ್ಟುಕೊಂಡು ಇಡೀ ದೇಶಾದ್ಯಂತ ಮರು ಪರೀಕ್ಷೆ ನಡೆಸುವುದು ಖಂಡನೀಯ. ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಎಲ್ಲಿ ಅಕ್ರಮ ನಡೆದಿದೆಯೋ ಅಲ್ಲಿ ಮಾತ್ರ ಮರು ಪರೀಕ್ಷೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ಅಂಕಿತಾ ಮಾತನಾಡಿ, “ನಾವು ಬಡವರು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎರಡು ವರ್ಷ ಕಷ್ಟಪಟ್ಟು ಓದಿದ್ದೇವೆ. ಈಗ ಪರೀಕ್ಷೆ ರದ್ದು ಮಾಡಿದರೆ ನಮ್ಮ ಶ್ರಮಕ್ಕೆ ಬೆಲೆಯಿಲ್ಲದಂತಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಜಿ.ವಿ. ಸುರೇಶ, ನೀಟ್ ಸಂಯೋಜಕ ಸಂಗಯ್ಯ ಸಿಂದಗಿಮಠ, ಉಪನ್ಯಾಸಕರಾದ ಎಲ್. ಸಾಗರಕುಮಾರ, ಎಸ್.ಕೆ. ಜಾನಿ, ಎನ್. ಅಲೇಕರೆಡ್ಡಿ, ಬಿ. ಸಾಯಿಕಿರಣ, ಎನ್. ಶ್ರೀನಿವಾಸ, ಐ.ಸಿ. ಮಲ್ಲಿಕಾರ್ಜುನ, ಎಮ್. ನಾಗಾರ್ಜುನ, ಬಸನಗೌಡ, ತಿಳಿಮಠ, ಗದ್ದೆಪ್ಪ, ರಾಜು, ಮೌನೇಶ ಬಡಿಗೇರ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಹೆಚ್ಚಿನ ಸುದ್ದಿ