ಗಂಗಾವತಿ, ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಮತಯಾಚನೆ
ಕೊಪ್ಪಳ, ಅ.17 ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗಂಗಾವತಿ, ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸಚಿವರು, ಶಿಕ್ಷಕರ ವೃತ್ತಿಪರ ಸಮಸ್ಯೆಗಳು, ಸೇವಾ ಸಂಬಂಧಿತ ಬೇಡಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಸವಾಲುಗಳಿಗೆ ಸೂಕ್ತ ಸ್ಪಂದನೆ ದೊರೆಯಬೇಕಾದರೆ ಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವ ಪ್ರತಿನಿಧಿಯ ಅಗತ್ಯವಿದೆ. ಹೀಗಾಗಿ ಮಟ್ಟೂರ ಅವರಿಗೆ ತಮ್ಮ ಮತ ನೀಡುವಂತೆ ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರದ ಚುನಾವಣೆ ಕೇವಲ ಪ್ರತಿನಿಧಿಯ ಆಯ್ಕೆಗೆ ಸೀಮಿತವಾಗಿರದೆ, ಶಿಕ್ಷಕರ ಬೇಡಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಸುವ ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಹಾಗೂ ನಮ್ಮ ಸರ್ಕಾರ ಶಿಕ್ಷಕರ ಜೊತೆಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗಂಗಾವತಿ, ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಲ್ಲಿ ನಡೆದ ಪ್ರಚಾರದ ಬಳಿಕ ಸಚಿವರು ಪಕ್ಷದ ಸಂಘಟನೆ, ಚುನಾವಣಾ ಸಿದ್ಧತೆ ಹಾಗೂ ಮತದಾರರನ್ನು ಸಂಪರ್ಕಿಸುವ ಕುರಿತು ಮುಖಂಡರ ಜೊತೆ ಚರ್ಚಿಸಿದರು. ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಡೆಯಬೇಕೆಂದು ಶಿವರಾಜ್ ತಂಗಡಗಿ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಬಸವರಾಜ ರಾಯರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ, ಸಂಸದ ಕೆ. ರಾಜಶೇಖರ ಹಿಟ್ನಾಳ್, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

