KRGRV
Tuesday, August 4, 2026
Homeಜಿಲ್ಲಾ ಸುದ್ದಿಗಳುಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಅಕ್ರಮ: ಉನ್ನತ ಮಟ್ಟದ ತನಿಖೆಗೆ ಎನ್. ರವಿಕುಮಾರ್ ಆಗ್ರಹ

ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಅಕ್ರಮ: ಉನ್ನತ ಮಟ್ಟದ ತನಿಖೆಗೆ ಎನ್. ರವಿಕುಮಾರ್ ಆಗ್ರಹ

ವಿಜಯಪುರ/ಹಾಸನ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಇಂದು ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಹಾಸನದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಗಂಭೀರ ಅಕ್ರಮ ಹಾಗೂ ಆಡಳಿತಾತ್ಮಕ ಲೋಪಗಳು ನಡೆದಿರುವುದನ್ನು ಖಂಡಿಸಿರುವ ಎನ್. ರವಿಕುಮಾರ್ ಅವರು, ಈ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂದ ಪ್ರಮುಖ ಲೋಪಗಳ ವಿವರ ಹೀಗಿದೆ:

ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ: ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಪರೀಕ್ಷೆಗೆ, ಪ್ರಶ್ನೆಪತ್ರಿಕೆಗಳನ್ನು ಸುಮಾರು ಒಂದು ಗಂಟೆ ತಡವಾಗಿ ಅಂದರೆ ಬೆಳಿಗ್ಗೆ 11 ಗಂಟೆಗೆ ವಿತರಿಸಲಾಗಿದೆ.

ಉತ್ತರ ಪತ್ರಿಕೆಗಳಲ್ಲಿ ವ್ಯತ್ಯಾಸ: ಅಭ್ಯರ್ಥಿಗಳಿಗೆ ನೀಡಲಾದ ಒಎಂಆರ್ (OMR) ಉತ್ತರ ಪತ್ರಿಕೆಗಳಲ್ಲಿನ ಸಂಖ್ಯೆಗಳಲ್ಲಿಯೂ ವ್ಯತ್ಯಾಸಗಳಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಈ ಎಲ್ಲಾ ಬೆಳವಣಿಗೆಗಳು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಆಡಳಿತಾತ್ಮಕ ನಿರ್ವಹಣೆಯ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ – ಆಕ್ರೋಶ
ಸರ್ಕಾರಿ ನೇಮಕಾತಿ ಪರೀಕ್ಷೆಗಳು ಲಕ್ಷಾಂತರ ಯುವಕರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಪ್ರಕ್ರಿಯೆಯಾಗಿದ್ದು, ಇಂತಹ ಪರೀಕ್ಷೆಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ, ಗೊಂದಲ ಅಥವಾ ಅಕ್ರಮಕ್ಕೆ ಅವಕಾಶ ಇರಬಾರದು ಎಂದು ಎನ್. ರವಿಕುಮಾರ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಹಲವು ವರ್ಷಗಳ ಪರಿಶ್ರಮ, ಸಮಯ ಹಾಗೂ ಹಣವನ್ನು ಹೂಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷಾ ನಿರ್ವಹಣೆಯ ಲೋಪಗಳಿಂದಾಗಿ ಸಾವಿರಾರು ಅಭ್ಯರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದು ಅತ್ಯಂತ ದುಃಖಕರ ಸಂಗತಿ ಎಂದಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗದ ನಿರೀಕ್ಷೆಯೊಂದಿಗೆ ಬಂದ ಅಭ್ಯರ್ಥಿಗಳಿಗೆ ಸಮರ್ಪಕ ಪರೀಕ್ಷಾ ವಾತಾವರಣ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ವಿಫಲವಾಗಿರುವುದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  1. ಉನ್ನತ ಮಟ್ಟದ ತನಿಖೆ: KEA ಈ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಬೇಕು.
  2. ಪಾರದರ್ಶಕತೆ:ಪರೀಕ್ಷೆಯಲ್ಲಿ ಏನು ನಡೆದಿದೆ ಎಂಬುದರ ನಿಜಾಂಶವನ್ನು ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಇಡಬೇಕು.
  3. ಕಠಿಣ ಕ್ರಮ: ಯಾವುದೇ ಅಧಿಕಾರಿಯ ನಿರ್ಲಕ್ಷ್ಯ ಅಥವಾ ಅಕ್ರಮ ಕಂಡುಬಂದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಶಿಸ್ತು ಕ್ರಮ ಜರುಗಿಸಬೇಕು
  4. ಅಭ್ಯರ್ಥಿಗಳಿಗೆ ನ್ಯಾಯ:ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಂಡು, ಸಂಬಂಧಿಸಿದ ಪರೀಕ್ಷಾ ಕೇಂದ್ರಗಳ ಕುರಿತು ಸೂಕ್ತ ನಿರ್ಧಾರದ ಮೂಲಕ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು.
    ರಾಜ್ಯದ ಯುವಕರಿಗೆ ನ್ಯಾಯಸಮ್ಮತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ನೇಮಕಾತಿ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸದೆ ಸಂಪೂರ್ಣ ಸತ್ಯಾಂಶವನ್ನು ಹೊರತರುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹೆಚ್ಚಿನ ಸುದ್ದಿ