KRGRV
Monday, September 7, 2026
Homeಜಿಲ್ಲಾ ಸುದ್ದಿಗಳುಯಡ್ರಾಮಿ ತಾಲೂಕು ‘ಮಾಡರೇಟ್’ ಅಲ್ಲ, ‘ತೀವ್ರ ಬರಪೀಡಿತ’ ತಾಲೂಕು ಎಂದು ಘೋಷಿಸಿ: ರಾಷ್ಟ್ರೀಯ ಸಮಾಜ ಪಕ್ಷದ...

ಯಡ್ರಾಮಿ ತಾಲೂಕು ‘ಮಾಡರೇಟ್’ ಅಲ್ಲ, ‘ತೀವ್ರ ಬರಪೀಡಿತ’ ತಾಲೂಕು ಎಂದು ಘೋಷಿಸಿ: ರಾಷ್ಟ್ರೀಯ ಸಮಾಜ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ದೇವೆಂದ್ರ ಚಿಗರಹಳ್ಳಿ ಆಗ್ರಹ

ಕಲಬುರಗಿ: ರಾಜ್ಯ ಸರ್ಕಾರದ ಎರಡನೇ ಪಟ್ಟಿಯಲ್ಲಿ ಯಡ್ರಾಮಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದಕ್ಕೆ ಸರ್ಕಾರಕ್ಕೆ ಹಾಗೂ ಜೇವರ್ಗಿ ಶಾಸಕರು ಮತ್ತು ಸಚಿವರಾದ ಡಾ. ಅಜಯ್ ಸಿಂಗ್ ಅವರಿಗೆ ಧನ್ಯವಾದಗಳು. ಆದರೆ, ಯಡ್ರಾಮಿ ತಾಲೂಕಿನ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಇದು ಕೇವಲ ಮಧ್ಯಮ (Moderate) ಬರಗಾಲವಲ್ಲ, ಬದಲಿಗೆ ‘ತೀವ್ರ ಬರಪೀಡಿತ’ (Severe Drought) ತಾಲೂಕು ಎಂದು ಘೋಷಿಸಬೇಕಿತ್ತು ಎಂದು ರಾಷ್ಟ್ರೀಯ ಸಮಾಜ ಪಕ್ಷದ ಕರ್ನಾಟಕ ಯುವ ಘಟಕದ ರಾಜ್ಯಾಧ್ಯಕ್ಷ ದೇವೆಂದ್ರ ಚಿಗರಹಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಳೆಯ ಕೈಕೊಟ್ಟ ಪರಿಣಾಮ ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ಕರಟಿಹೋಗಿದ್ದು, ಅನ್ನದಾತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೇವಲ ಕಾಗದದಲ್ಲಿ ಅಥವಾ ಸಾಂಪ್ರದಾಯಿಕವಾಗಿ ಬರಪೀಡಿತ ಎಂದು ಘೋಷಣೆ ಮಾಡಿದರೆ ರೈತರ ಬದುಕು ಹಸನಾಗುವುದಿಲ್ಲ. ಆದ್ದರಿಂದ ತಕ್ಷಣವೇ ಜೇವರ್ಗಿ ತಾಲೂಕನ್ನೂ ಸಹ ‘ತೀವ್ರ ಬರಪೀಡಿತ ತಾಲೂಕು’ ಎಂದು ಮರುಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು. ಬರಪೀಡಿತ ಘೋಷಣೆಯ ಪ್ರಕ್ರಿಯೆಯನ್ನು ಕೇವಲ ಪ್ರಚಾರಕ್ಕೆ ಸೀಮಿತಗೊಳಿಸದೆ, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ರೈತನ ಬ್ಯಾಂಕ್ ಖಾತೆಗೆ ತಕ್ಷಣವೇ ಬರ ಪರಿಹಾರದ ಹಣವನ್ನು ಜಮಾ ಮಾಡಬೇಕು ಎಂದು ಜೇವರ್ಗಿ–ಯಡ್ರಾಮಿ ರೈತರ ಪರವಾಗಿ ದೇವೆಂದ್ರ ಚಿಗರಹಳ್ಳಿ (ರಾಜ್ಯಾಧ್ಯಕ್ಷರು, ಯುವ ಘಟಕ, ರಾಷ್ಟ್ರೀಯ ಸಮಾಜ ಪಕ್ಷ ಕರ್ನಾಟಕ) ಸರ್ಕಾರವನ್ನು ಗಟ್ಟಿಯಾಗಿ ಆಗ್ರಹಿಸಿದ್ದಾರೆ.

ಹೆಚ್ಚಿನ ಸುದ್ದಿ