ಬೆಂಗಳೂರು: ಎಪಿಎಸ್ ಪಿಯು ಕಾಲೇಜು ಆಫ್ ಆರ್ಟ್ಸ್, ಸೈನ್ಸ್ ಅಂಡ್ ಕಾಮರ್ಸ್ನ ಜ್ಞಾನ ದೇಗುಲ ಕ್ಯಾಂಪಸ್ ನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹಿರಿಯ ನಟ ಹಾಗೂ ಎಪಿಎಸ್ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಪ್ರಣಯರಾಜ ಡಾ. ಶ್ರೀನಾಥ್ ಪ್ರತಿಭಾ ದಿನಾಚರಣೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಂತರ ಮಾತನಾಡಿ, ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಿಎ ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯವನ್ನು ಗುರುತಿಸಿಕೊಂಡು, ತನ್ನಲ್ಲಿರುವ ಪ್ರತಿಭೆಯನ್ನು ಬೆಳೆಸಿಕೊಂಡು, ಜವಾಬ್ದಾರಿಯುತ ನಾಗರಿಕನಾಗಿ ಹಾಗೂ ದೇಶದ ಆಸ್ತಿಯಾಗಿ ರೂಪುಗೊಳ್ಳಲು ಅತ್ಯುತ್ತಮ ಪ್ರಯತ್ನ ಮಾಡಬೇಕು. ಆತ್ಮವಿಶ್ವಾಸದಿಂದ ಶಿಸ್ತು ಮೈಗೂಡಿಸಿಕೊಂಡು ಉತ್ತಮ ಚಾರಿತ್ರ್ಯ ಹೊಂದಬೇಕು ಎಂದರು.
ಕಾಲೇಜಿನ ಅಧ್ಯಕ್ಷರಾದ ಟಿ.ವಿ. ಪ್ರಭು, ಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ್ ಹಾಗೂ ಪ್ರಾಂಶುಪಾಲರಾದ ನಾಗರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

