ಅಂಕಣ : ರವಿ ಖಾನಾಪುರ ವಕೀಲರು ಬಿಜೆಪಿ ಮುಖಂಡರು ರಾಜ್ಯ ರಾಜಕೀಯ ವಿಶ್ಲೇಷಕರು
ಬೆಂಗಳೂರ :: ಯಾವುದೇ ರಾಜಕೀಯ ಪಕ್ಷದಲ್ಲಿ ಒಬ್ಬ ವ್ಯಕ್ತಿಯನ್ನು ಕೆಳಗಿಳಿಸುವ ಪ್ರಯತ್ನಗಳು ಆರಂಭವಾದಾಗ, ಅದು ಕೇವಲ ವ್ಯಕ್ತಿಯ ವಿರುದ್ಧದ ಹೋರಾಟವಾಗಿರುವುದಿಲ್ಲ; ಅದು ಸಂಘಟನೆಯ ಶಕ್ತಿ, ಕಾರ್ಯಕರ್ತರ ಆತ್ಮವಿಶ್ವಾಸ ಮತ್ತು ಜನರ ನಂಬಿಕೆಯ ಮೇಲಿನ ಪರೋಕ್ಷ (ಗಮನಕ್ಕೆ ಬಾರದೆ ಹೋಗಿರುತ್ತದೆ ಸ್ವಾರ್ಥದ ಮನಸ್ಸಿನಿಂದ )ದಾಳಿಯಾಗಿರುತ್ತದೆ
ಒಬ್ಬ ನಾಯಕನನ್ನು ದುರ್ಬಲಗೊಳಿಸಿದರೆ ತಾವೇ ಬಲಿಷ್ಠರಾಗುತ್ತೇವೆ ಎನ್ನುವ ಲೆಕ್ಕಾಚಾರ ರಾಜಕೀಯದ ಅತಿದೊಡ್ಡ ಭ್ರಮೆ ಈ ಭ್ರಮೆ ಕೆಲವರಲ್ಲಿ ಇರೋದು ಕೂಡಾ ಸತ್ಯ . ಒಬ್ಬ ವ್ಯಕ್ತಿಯ ಸ್ಥಾನವನ್ನು ಅಲ್ಲಾಡಿಸಬಹುದು, ಆದರೆ ಆ ಪ್ರಕ್ರಿಯೆಯಲ್ಲಿ ಸಂಘಟನೆಯ ಅಡಿಪಾಯವನ್ನೇ ಅಲ್ಲಾಡಿಸಿದರೆ ಅದರ ಲಾಭವನ್ನು ಪಡೆಯುವುದು ರಾಜಕೀಯ ಎದುರಾಳಿಗಳು ಮಾತ್ರ ಅದೂ ಕರ್ನಾಟಕದಲ್ಲಿ ಬಹಳ ಸರಳ ಆಗುತ್ತದೆ.
ರಾಜಕೀಯದ ಇತಿಹಾಸ ಹೇಳುವುದೇನೆಂದರೆ, ಹೊರಗಿನ ವಿರೋಧಕ್ಕಿಂತ ಒಳಗಿನ ಗುಂಪುಗಾರಿಕೆ, ವೈಯಕ್ತಿಕ ದ್ವೇಷ ಮತ್ತು ಅಧಿಕಾರದ ಹಂಬಲವೇ ಅನೇಕ ಬಲಿಷ್ಠ ಸಂಘಟನೆಗಳನ್ನು ದುರ್ಬಲಗೊಳಿಸಿದೆ ಎನ್ನುವುದು ನೋಡಿದ್ದೇವೆ. ಎದುರಾಳಿಗಳು ಮಾಡಲಾರದ ಹಾನಿಯನ್ನು ಕೆಲವೊಮ್ಮೆ ಸ್ವಪಕ್ಷೀಯರೇ (ಗುಮ್ಮನ ಗುಸಕರು ಅಂತಾರೆ ನಮ್ಮ ಉ ಕ ದಲ್ಲಿ ಹಿಂತವರಿಗೆ )ಮಾಡುತ್ತಾರೆ. ಇದು ಕೇವಲ ರಾಜಕೀಯ ವಿಪರ್ಯಾಸವಲ್ಲ, ಸಂಘಟನೆಯ ಆತ್ಮವಿನಾಶದ ಆರಂಭ ಆಗುತ್ತದೆ.
ಒಬ್ಬ ವ್ಯಕ್ತಿಯ ಗೆಲುವು ಅಥವಾ ಸೋಲನ್ನು ಪಕ್ಷದ ಭವಿಷ್ಯಕ್ಕಿಂತ ದೊಡ್ಡದಾಗಿ ನೋಡುವ ಮನಸ್ಥಿತಿ ಅಪಾಯಕಾರಿ. ಏಕೆಂದರೆ ಸಂಘಟನೆ ಬಲವಾಗಿದ್ದರೆ ವ್ಯಕ್ತಿಗಳು ಒಬ್ಬರಿಂದ ನೂರು ಜನ ಬೆಳೆಯುತ್ತಾರೆ; ಆದರೆ ವ್ಯಕ್ತಿಗಳ ಮಹತ್ವಾಕಾಂಕ್ಷೆಗಾಗಿ ಸಂಘಟನೆಯನ್ನೇ ಬಲಿಕೊಟ್ಟರೆ, ಅಂತಿಮವಾಗಿ ಎಲ್ಲರೂ ಸೋಲುತ್ತಾರೆ ಅದರ ಅರಿವು ಇದೆ ಇಲ್ಲಿ.
ಸಂಘಟನೆಯ ಗೆಲುವೇ ವ್ಯಕ್ತಿಯ ಗೆಲುವು ಎಂಬ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳದವರು, ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಂಘಟನೆಯ ಭವಿಷ್ಯವನ್ನು ಪಣಕ್ಕಿಡುತ್ತಿದ್ದಾರೆ . ಅಂಥ ರಾಜಕೀಯದಲ್ಲಿ ತಾತ್ಕಾಲಿಕ ಚಪ್ಪಾಳೆ ಸಿಗಬಹುದು, ತುಟಿಯಂಚಲ್ಲಿ ನಗೂನು ಬರಬಹುದು ಆದರೆ ಇತಿಹಾಸದಲ್ಲಿ ಅದು ದೂರದೃಷ್ಟಿಯ ನಾಯಕತ್ವವಾಗಿ ಅಲ್ಲ, ಸ್ವಾರ್ಥದ ರಾಜಕೀಯವಾಗಿ ದಾಖಲಾಗುತ್ತದೆ ನೆನಪಿರಲಿ.
ಇಲ್ಲಿ ವ್ಯಕ್ತಿಗಳು ಶಾಶ್ವತವಲ್ಲ. ಹುದ್ದೆಗಳು ಶಾಶ್ವತವಲ್ಲ ಆಯಾ ಕಾಲಕ್ಕೆ ನಡೆದು ಸಾಗುವ ಪ್ರಕ್ರಿಯೆ ಅಷ್ಟೇ . ಆದರೆ ಸಿದ್ಧಾಂತ, ಸಂಘಟನೆ ಮತ್ತು ಕಾರ್ಯಕರ್ತರ ವಿಶ್ವಾಸ ಉಳಿದರೆ ಮಾತ್ರ ರಾಜಕೀಯ – ರಾಜಕಾರಣ ಜೀವಂತವಾಗಿರುತ್ತದೆ. ವ್ಯಕ್ತಿಯ ವಿರುದ್ಧ ನಡೆಸುವ ಪ್ರತಿಯೊಂದು ಅನಗತ್ಯ ಹೇಳಿಕೆಗಳು, ತೆಗಳಿಕೆಗಳು ಮತ್ತು ಆರೋಪಗಳು ಅಂತಿಮವಾಗಿ ಸಂಘಟನೆಯ ವಿರುದ್ಧವೇ ನಡೆಸಿದ ಕೆಟ್ಟಗಳಿಗೆ ಇತಿಹಾಸದಲ್ಲಿ ದಾಖಲಾಗುತ್ತದೆ ಅಷ್ಟೇ.
ಪಕ್ಷದ ಬಲ ವ್ಯಕ್ತಿಗಳ ಬದಲಾವಣೆಯಲ್ಲಿ ಇರಲ್ಲ ನಮ್ಮೆಲ್ಲರ ಏಕತೆಯಲ್ಲಿ ಇರುತ್ತದೆ. ಕೇವಲ ಈ ರೀತಿಯ ವಿರೋಧ ಅಭಿಯಾನದಿಂದ ನೀವೂ ದಿನಾ ಹೇಳುವ ಸಿದ್ಧಾಂತ ಮರೆತು ಇದೆಲ್ಲ ನಡೆಯುತ್ತಿದೆ ಹಾಗೂ ಮಾಡುತಿದ್ದೇವೆ ಅಂತಾ ಒಮ್ಮೆಯಾದರೂ ಅನಿಸಬೇಕಲ್ಲವೇ! ಇಷ್ಟ್ಟೆಲ್ಲಾ ನಿಮ್ಮ ನಿಮ್ಮ ತೆವಲಿಗಾಗಿ ದೇವದುರ್ಲಭ ಕಾರ್ಯಕರ್ತರ ಬಲಿ ಕೊಡುತ್ತಿದ್ದೀರಿ ಅನ್ನೋದು ನೆನಪಿರಲಿ, ಅಧಿಕಾರ ಸಿಗೋದು ಬೆರಳಣಿಕೆ ಜನಕ್ಕೆ ಮನೆ, ಮಕ್ಳು ಸಂಸಾರ ಉದ್ದೋಗ ಬಿಟ್ಟು ಪ್ರಾಮಾಣಿಕವಾಗಿ ದುಡಿಯೋದು ಲಕ್ಷಾಂತರ ಕಾರ್ಯಕರ್ತರು ಒಮ್ಮೆ ಯೋಚನೆ ಮಾಡಿ ನೋಡಿ.

