KRGRV
Wednesday, September 23, 2026
Homeಜಿಲ್ಲಾ ಸುದ್ದಿಗಳುಸತತ ಐದು ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ: ಎಸ್‌.ಎಸ್‌.ಎಂ.ಎಸ್‌. ಕಾಲೇಜಿನ ಕ್ರೀಡಾ ಸಾಧನೆ

ಸತತ ಐದು ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ: ಎಸ್‌.ಎಸ್‌.ಎಂ.ಎಸ್‌. ಕಾಲೇಜಿನ ಕ್ರೀಡಾ ಸಾಧನೆ

ಅಥಣಿ: ಕೆಎಲ್‌ಇ ಸಂಸ್ಥೆಯ ಎಸ್‌ಎಸ್‌ಎಂಎಸ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಥಣಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸತತ ಐದನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

2026-27ನೇ ಸಾಲಿನ ಅಥಣಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಭೋಜರಾಜ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ತಾಲೂಕಿನ ಸುಮಾರು 42 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಎಸ್‌ಎಸ್‌ಎಂಎಸ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಒಟ್ಟು ಸುಮಾರು 277 ಅಂಕಗಳನ್ನು ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದರು.

ಇದರೊಂದಿಗೆ 2022-23, 2023-24, 2024-25, 2025-26 ಹಾಗೂ 2026-27ನೇ ಸಾಲಿನಲ್ಲಿ ಸತತ ಐದು ಬಾರಿ ತಾಲೂಕು ಮಟ್ಟದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗೆದ್ದಿರುವ ಹೆಗ್ಗಳಿಕೆಗೆ ಕಾಲೇಜು ಪಾತ್ರವಾಗಿದೆ.

ಗುಂಪು ಆಟಗಳಲ್ಲಿ ಖೋ-ಖೋ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಥಮ, ಥ್ರೋಬಾಲ್ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಥಮ, ಕಬಡ್ಡಿ ಬಾಲಕಿಯರ ತಂಡ ಪ್ರಥಮ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ವಾಲಿಬಾಲ್‌ನಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿದೆ.

ಯೋಗಾಸನ ಸ್ಪರ್ಧೆಯಲ್ಲಿ ಬಾಲಕರು ಆರು ಹಾಗೂ ಬಾಲಕಿಯರು ಮೂರು ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ. ಟೆನಿಕ್ವಾಯ್ಟ್‌ನಲ್ಲಿ ಬಾಲಕರು ಪ್ರಥಮ ಹಾಗೂ ಬಾಲಕಿಯರು ದ್ವಿತೀಯ ಸ್ಥಾನ ಗಳಿಸಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿಯೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಾಲ್ನಡಿಗೆ ಸ್ಪರ್ಧೆಯಲ್ಲಿ ಬಾಲಕ ಹಾಗೂ ಬಾಲಕಿ ಪ್ರಥಮ, ಚೆಸ್‌ನಲ್ಲಿ ಬಾಲಕ ಹಾಗೂ ಬಾಲಕಿ ಪ್ರಥಮ, ಎತ್ತರ ಜಿಗಿತದಲ್ಲಿ ಬಾಲಕ ಪ್ರಥಮ ಸ್ಥಾನ ಪಡೆದಿದ್ದಾರೆ. 800 ಮೀಟರ್ ಓಟದಲ್ಲಿ ಬಾಲಕ ಪ್ರಥಮ ಹಾಗೂ ಬಾಲಕಿಯರು ದ್ವಿತೀಯ, 200 ಮೀಟರ್ ಓಟದಲ್ಲಿ ಬಾಲಕಿಯರು ಪ್ರಥಮ, 100 ಮೀಟರ್ ಓಟದಲ್ಲಿ ಬಾಲಕಿಯರು ತೃತೀಯ ಸ್ಥಾನ ಪಡೆದಿದ್ದಾರೆ.

ಇದಲ್ಲದೆ ಹರ್ಡಲ್ಸ್‌ನಲ್ಲಿ ಬಾಲಕ ಹಾಗೂ ಬಾಲಕಿಯರು ದ್ವಿತೀಯ ಮತ್ತು ತೃತೀಯ, 3000 ಮೀಟರ್ ಗುಡ್ಡಗಾಡು ಓಟದಲ್ಲಿ ತೃತೀಯ, 100 ಮೀಟರ್ ರಿಲೇಯಲ್ಲಿ ಬಾಲಕರ ತಂಡ ಪ್ರಥಮ ಹಾಗೂ ಬಾಲಕಿಯರ ತಂಡ ದ್ವಿತೀಯ, 400 ಮೀಟರ್ ರಿಲೇಯಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ತ್ರಿವಿಧ ಜಿಗಿತದಲ್ಲಿ ಬಾಲಕ ಹಾಗೂ ಬಾಲಕಿ ದ್ವಿತೀಯ, ಪೋಲ್‌ವಾಲ್ಟ್‌ನಲ್ಲಿ ಬಾಲಕ ದ್ವಿತೀಯ, ಗುಂಡು ಎಸೆತದಲ್ಲಿ ಬಾಲಕ ಪ್ರಥಮ, ಚಕ್ರ ಎಸೆತದಲ್ಲಿ ಬಾಲಕ ತೃತೀಯ ಹಾಗೂ ಭಲ್ಲೆ ಎಸೆತದಲ್ಲಿ ಬಾಲಕಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ತಾಲೂಕು ಮಟ್ಟದ ಸಾಧನೆಯ ಬಳಿಕ ವಿವಿಧ ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿಯೂ ಎಸ್‌ಎಸ್‌ಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಪ್ರದರ್ಶನ ನೀಡಿದ್ದು, 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ಎಚ್.ವಿ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಬಾಲ್ ಪಂದ್ಯಾವಳಿಯಲ್ಲಿ ಬಾಲಕರು ಆರು ಪ್ರಥಮ ಸ್ಥಾನ ಹಾಗೂ ಬಾಲಕಿಯರು ಮೂರು ದ್ವಿತೀಯ ಸ್ಥಾನಗಳನ್ನು ಪಡೆದಿದ್ದಾರೆ. ಕೆಆರ್‌ಇಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರು ದ್ವಿತೀಯ ಸ್ಥಾನ ಪಡೆದು ಮೂವರು ಬಾಲಕಿಯರು ಹಾಗೂ ಇಬ್ಬರು ಬಾಲಕರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು, ಉಳ್ಳಾಗಡ್ಡಿ-ಖಾನಾಪುರದಲ್ಲಿ ನಡೆದ ಖೋ-ಖೋ ಪಂದ್ಯಾವಳಿಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದು ಆರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಗವಾಡದ ಶಿವಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಪಡೆದು ನಾಲ್ವರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಸ್ತಿ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಬಾಲಕರ 60 ಕೆ.ಜಿ. ವಿಭಾಗದಲ್ಲಿ ಪ್ರಥಮ, 71 ಹಾಗೂ 98 ಕೆ.ಜಿ. ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ 48 ಮತ್ತು 53 ಕೆ.ಜಿ. ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾದ ಅಮಿತ್ ಪಿ. ಕೋರೆ, ಆಡಳಿತ ಮಂಡಳಿಯ ನಿರ್ದೇಶಕರು, ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಎಂ.ಜಿ. ಹಂಜಿ ಹಾಗೂ ಸದಸ್ಯರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಲಿಂಗರಾಜ್ ಎನ್., ಅಥಣಿ ತಾಲೂಕು ಕ್ರೀಡಾ ಸಂಯೋಜಕ ಜಿ.ಎಂ. ಚನಗೊಂಡ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಮಗದುಮ್ಮ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆರ್.ಎನ್. ಇನಾಮದಾರ, ಕ್ರೀಡಾ ವಿಭಾಗದ ಸಂಯೋಜಕ ಚಿದಾನಂದ ದಳವಾಯಿ, ದೈಹಿಕ ನಿರ್ದೇಶಕ ಕಾಶೀನಾಥ ಖೇತಗೌಡರ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.

ಹೆಚ್ಚಿನ ಸುದ್ದಿ