ಬೆಂಗಳೂರು: ಎಥನಾಲ್ ಇಂಧನದ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ವದಂತಿಗಳನ್ನು ನಂಬಬಾರದೆಂದು ಮಾಜಿ ಸಚಿವ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಡಾ. ಮುರುಗೇಶ್ ಆರ್. ನಿರಾಣಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಎಥನಾಲ್ ಇಂಧನವು ರೈತರ ಶಕ್ತಿ ಮತ್ತು ರಾಷ್ಟ್ರದ ಭವಿಷ್ಯ ಎಂದು ಅವರು ಬಣ್ಣಿಸಿದ್ದಾರೆ.
ಜಾಗತಿಕ ಯಶಸ್ಸು:ಥೈಲ್ಯಾಂಡ್, ಅಮೆರಿಕ ಮತ್ತು ಬ್ರೆಜಿಲ್ ದೇಶಗಳಲ್ಲಿ ಕಳೆದ 50 ವರ್ಷಗಳಿಂದ ಎಥನಾಲ್ ಇಂಧನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದ್ದು, ಅಲ್ಲಿನ ವಾಹನಗಳ ಇಂಜಿನ್ಗಳಿಗೆ ಯಾವುದೇ ತೊಂದರೆಯಾಗಿಲ್ಲ.
ಸುರಕ್ಷತೆಯ ಭರವಸೆ: ವಿದೇಶಗಳಲ್ಲಿ ಯಶಸ್ವಿಯಾಗಿ ಬಳಕೆಯಲ್ಲಿರುವ ಈ ತಂತ್ರಜ್ಞಾನವು ಭಾರತದ ವಾಹನಗಳಿಗೂ 100% ಸುರಕ್ಷಿತವಾಗಿದೆ. ಇಂಜಿನ್ ಹಾಳಾಗುತ್ತದೆ ಎಂಬುದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೇವಲ ಸುಳ್ಳು ವದಂತಿಯಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರೈತರಿಗೆ ಆರ್ಥಿಕ ಲಾಭ:ಕಬ್ಬು, ಮೆಕ್ಕೆಜೋಳ ಮತ್ತು ಧಾನ್ಯಗಳಿಂದ ಎಥನಾಲ್ ತಯಾರಾಗುವುದರಿಂದ, ಈವರೆಗೆ ವಿದೇಶಿ ಕಂಪನಿಗಳಿಗೆ ಹೋಗುತ್ತಿದ್ದ ಹಣ ನೇರವಾಗಿ ಭಾರತದ ಅನ್ನದಾತರ ಜೇಬು ಸೇರಲಿದೆ.
ಆರ್ಥಿಕ ಸ್ವಾವಲಂಬನೆ: ವಿದೇಶಗಳಿಂದ ಕಚ್ಚಾ ತೈಲ (ಕ್ರೂಡ್ ಆಯಿಲ್) ಆಮದು ಮಾಡಿಕೊಳ್ಳುವುದು ಕಡಿಮೆಯಾಗುವುದರಿಂದ ದೇಶದ ಕೋಟ್ಯಂತರ ರೂಪಾಯಿ ಸಂಪತ್ತು ಉಳಿತಾಯವಾಗಲಿದೆ.
ಆತ್ಮನಿರ್ಭರ ಭಾರತ: ಎಥನಾಲ್ ಬಳಕೆಯು ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲಿದ್ದು, ದೇಶದ ಪ್ರಗತಿಗೆ ಹೊಸ ವೇಗ ನೀಡಲಿದೆ.
ಕೊನೆಯದಾಗಿ, ಸುಳ್ಳು ವದಂತಿಗಳನ್ನು ಬಿಟ್ಟು ಸತ್ಯವನ್ನು ಅರಿತು ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಡಾ. ಮುರುಗೇಶ್ ಆರ್. ನಿರಾಣಿ ಅವರು ಕರೆ ನೀಡಿದ್ದಾರೆ.

