KRGRV
Monday, October 12, 2026
Homeಬೆಂಗಳೂರುಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ

ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ

  • ಪ್ರತಿ ವಿದ್ಯಾರ್ಥಿಗೆ ₹15 ಸಾವಿರ ಪ್ರೋತ್ಸಾಹಧನ ವಿತರಣೆ
  • ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ಶ್ರಮವೇ ಅಡಿಪಾಯ ಎಂದ ಸಚಿವರು

ಬೆಂಗಳೂರು, ಅ. 11: “ನಮ್ಮ ತಂದೆ ಎಸ್. ಬಂಗಾರಪ್ಪ ಅವರು ನಮ್ಮ ಕುಟುಂಬದ ಆಸ್ತಿಯಲ್ಲ; ಇಡೀ ಸೊರಬದಸ ಜನತೆಯ ಆಸ್ತಿ. ನಿಮ್ಮ ಕುಟುಂಬದ ಹಿರಿಯರು ಮತ ನೀಡಿ ಅವರನ್ನು ಗೆಲ್ಲಿಸಿದ್ದರಿಂದ ಅವರು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಆ ಋಣ ನಮ್ಮ ಮೇಲಿದೆ. ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ತಂದೆಯವರಿಗೆ ಸಲ್ಲಿಸುವ ಗೌರವವಾಗಿದೆ,” ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಶ್ರೀ ಎಸ್. ಬಂಗಾರಪ್ಪ ಪ್ರತಿಷ್ಠಾನ (ರಿ) ಹಾಗೂ ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಆನಂದರಾವ್ ಸರ್ಕಲ್ ಸಮೀಪದ ರೇಸ್ ಕೋರ್ಸ್ ಕ್ರಾಸ್ ರಸ್ತೆಯ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಆಡಿಟೋರಿಯಂನಲ್ಲಿ ಇಂದು ಬೆಂಗಳೂರಿನಲ್ಲಿ ನೆಲೆಸಿರುವ ಸೊರಬ ವಿಧಾನಸಭಾ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಗಳೂರು ಟೀಮ್ ಸಮ್ಮಿಲನ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಮತ್ತು ಕ್ರೀಡೆ, ಸಾಂಸ್ಕೃತಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ₹15 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.

ಪೋಷಕರ ಶ್ರಮವನ್ನು ಮರೆಯಬೇಡಿ

“ನಿಮ್ಮ ಈ ಸಾಧನೆಯನ್ನು ತಂದೆ-ತಾಯಿಗೆ ಅರ್ಪಿಸಿ. ಅವರು ಶ್ರಮಪಟ್ಟು ನಿಮ್ಮನ್ನು ಓದಿಸಿದ್ದರಿಂದಲೇ ನೀವು ಈ ಹಂತಕ್ಕೆ ತಲುಪಿದ್ದೀರಿ. ಈ ಪ್ರೋತ್ಸಾಹ ನಿಮ್ಮ ಮುಂದಿನ ಸಾಧನೆಗಳಿಗೆ ಸ್ಫೂರ್ತಿಯಾಗಲಿ. ಭವಿಷ್ಯದಲ್ಲಿ ಇನ್ನೂ ಎತ್ತರಕ್ಕೆ ಬೆಳೆದು ದೊಡ್ಡ ಸಾಧನೆಗಳನ್ನು ಮಾಡಬೇಕು,” ಎಂದು ಹಾರೈಸಿದರು.

“ಬೆಂಗಳೂರಿನಲ್ಲಿ ಉದ್ಯೋಗ ಹಾಗೂ ವಿವಿಧ ಕಾರಣಗಳಿಗಾಗಿ ನೆಲೆಸಿರುವ ಸೊರಬದ ಜನರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮುಂದಾಗಿರುವುದು ಸಂತಸದ ಸಂಗತಿ. ನೀವೆಲ್ಲರೂ ಸೇರಿ ಟೀಮ್ ಸಮ್ಮಿಲನ ಸಂಘಟನೆಯನ್ನು ಕಟ್ಟಿಕೊಂಡು ಕಳೆದ ಎರಡು ವರ್ಷಗಳಿಂದ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೀರಿ. ಇದರ ಶ್ರೇಯಸ್ಸು ಸಂಘಟಕರಿಗೆ ಸಲ್ಲಬೇಕು,” ಎಂದರು.

ಜನರ ಪ್ರೀತಿಯೇ ದೊಡ್ಡ ಶಕ್ತಿ

“ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಸಚಿವನಾಗಿದ್ದೇನೆ. ಶಿಕ್ಷಣ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಮತ್ತು ನಾಯಕರು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಹೀಗೆಯೇ ಇರಲಿ,” ಎಂದು ಹೇಳಿದರು.

“ಇಂದು ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರು ಸೊರಬದ ಘನತೆಯನ್ನು ಹೆಚ್ಚಿಸಿದ್ದೀರಿ. ಶಿಕ್ಷಣ ಸಚಿವನಾಗಿ ನಿಮ್ಮನ್ನು ಗೌರವಿಸುತ್ತಿರುವುದು ನನಗೆ ಹೆಮ್ಮೆಯ ಸಂಗತಿ. ಸೊರಬ ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ತೋರುತ್ತಿರುವ ಪ್ರೀತಿ, ಅಭಿಮಾನವನ್ನು ನೋಡಿದಾಗ ಒಂದು ವಿಚಾರ ಮನದಟ್ಟಾಗುತ್ತದೆ. ನಾನು ನಮ್ಮ ತಂದೆ ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು; ಆದರೆ ಲಕ್ಷಾಂತರ ಬಂಗಾರಪ್ಪ ಅವರನ್ನು ಪಡೆದುಕೊಂಡಿದ್ದೇನೆ ಎಂಬ ಹೆಮ್ಮೆ ನನಗಿದೆ,” ಎಂದು ಭಾವುಕರಾಗಿ ನುಡಿದರು.

ಸಚಿವ ದಂಪತಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಅವರ ಪತ್ನಿ ಅನಿತಾ ಎಸ್. ಮಧು ಬಂಗಾರಪ್ಪ ಅವರನ್ನು ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಸನ್ಮಾನಿಸಲಾಯಿತು.

ಆರ್‌ಡಿಪಿಆರ್ ಇಲಾಖೆಯ ನಿರ್ದೇಶಕ ಏಕಾಂತಪ್ಪ ಸ್ವಾಗತಿಸಿದರು. ಗಣಪತಿ ಹಳೆಸೊರಬ ಹಾಗೂ ಬಿಂದು ಎಚ್.ಎನ್. ನಿರೂಪಿಸಿದರು. ಸೃಷ್ಟಿ.ಇ. ಪ್ರಾರ್ಥಿಸಿದರು.

ಹೆಚ್ಚಿನ ಸುದ್ದಿ