KRGRV
Monday, October 12, 2026
Homeಬೆಂಗಳೂರುಸ್ವಚ್ಛತೆಯೇ ಸೇವೆ, ಜವಾಬ್ದಾರಿಯೇ ನಾಗರಿಕ ಧರ್ಮ: ಉಚ್ಚ ನ್ಯಾಯಾಲಯದಲ್ಲಿ ‘ಸ್ವಚ್ಛತಾ ಹೀ ಸೇವಾ–2026’

ಸ್ವಚ್ಛತೆಯೇ ಸೇವೆ, ಜವಾಬ್ದಾರಿಯೇ ನಾಗರಿಕ ಧರ್ಮ: ಉಚ್ಚ ನ್ಯಾಯಾಲಯದಲ್ಲಿ ‘ಸ್ವಚ್ಛತಾ ಹೀ ಸೇವಾ–2026’

ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ಸ್ವಚ್ಛತಾ ಸಂಕಲ್ಪ; ವಿಕಸಿತ ಭಾರತ ನಿರ್ಮಾಣಕ್ಕೆ ಸಹಭಾಗಿತ್ವದ ಕರೆ

ಬೆಂಗಳೂರು, ಅ.10:
ಸ್ವಚ್ಛತೆ ಕೇವಲ ಅಭಿಯಾನವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ ಎಂಬ ಸಂದೇಶದೊಂದಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ‘ಸ್ವಚ್ಛತಾ ಹೀ ಸೇವಾ–2026’ ಕಾರ್ಯಕ್ರಮವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.

“ಸ್ವಚ್ಛತೆಯಲ್ಲಿ ಸಹಭಾಗಿತ್ವ – ಸ್ವಚ್ಛ ಭಾರತ, ವಿಕಸಿತ ಭಾರತ” ಎಂಬ ಆಶಯದಡಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರ ವತಿಯಿಂದ ಆಯೋಜಿಸಲಾದ ಈ ಅಭಿಯಾನಕ್ಕೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಕೆ. ಅರವಿಂದ್ ಕಾಮತ್ ಅವರು ನೇತೃತ್ವ ವಹಿಸಿದ್ದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಹಾಗೂ ಎಚ್. ಶಾಂತಿ ಭೂಷಣ್ ಅವರ ಉಪಸ್ಥಿತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಮಹತ್ವದ ಸಂದೇಶ ಸಾರಿತು.

ಅಭಿಯಾನದ ಸಂಚಾಲಕರಾದ ವಕೀಲ ಹಾಗೂ ಕೇಂದ್ರ ಸರ್ಕಾರದ ವಕೀಲ (Advocate & CGC) ಜಗದೀಶ್ ಜಿ. ಕುಂಬಾರ್ ಅವರ ಸಂಘಟನಾ ಪ್ರಯತ್ನ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಸ್ವಚ್ಛತಾ ಹೀ ಸೇವಾ ಅಭಿಯಾನದ ಉದ್ದೇಶ ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗಿರದೆ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಶಾಶ್ವತವಾದ ಅರಿವು ಮೂಡಿಸುವುದಾಗಿದೆ. ಸ್ವಚ್ಛ ಪರಿಸರವು ಆರೋಗ್ಯವಂತ ಸಮಾಜದ ಬುನಾದಿಯಾಗಿದ್ದು, ಪ್ರತಿಯೊಬ್ಬರ ಸಹಕಾರದಿಂದ ಮಾತ್ರ ಸ್ವಚ್ಛ ಹಾಗೂ ಸಮೃದ್ಧ ಭಾರತದ ನಿರ್ಮಾಣ ಸಾಧ್ಯ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ನ್ಯಾಯಾಂಗ ಕ್ಷೇತ್ರದ ಗಣ್ಯರು, ಕೇಂದ್ರ ಸರ್ಕಾರದ ವಕೀಲರು ಹಾಗೂ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಸಂಕಲ್ಪ ಮಾಡಿದರು.

“ನಮ್ಮ ಪರಿಸರ ಸ್ವಚ್ಛವಾಗಿದ್ದರೆ ನಮ್ಮ ಸಮಾಜ ಆರೋಗ್ಯಕರವಾಗಿರುತ್ತದೆ. ಸ್ವಚ್ಛತೆಯ ಸಂಕಲ್ಪ ಪ್ರತಿಯೊಬ್ಬರ ಬದುಕಿನ ಭಾಗವಾಗಬೇಕು” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಹೆಚ್ಚಿನ ಸುದ್ದಿ