ಮಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಆದೇಶದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಸಿ ಮೀನು ಸಂರಕ್ಷಣೆಗಾಗಿ ಬಳಸಲಾಗುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಪರಿಶೀಲನಾ ಭೇಟಿ ನಡೆಸಿದರು.
ಮಂಗಳೂರಿನ ಬಂದರು ಧಕ್ಕೆ ಪ್ರದೇಶದಲ್ಲಿರುವ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಅಲ್ಲಿ ತಯಾರಿಸಲಾಗುತ್ತಿರುವ ಮಂಜುಗಡ್ಡೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದರು. ಅಲ್ಲದೆ, ಮಂಜುಗಡ್ಡೆ ತಯಾರಿಕೆಗೆ ಬಳಸಲಾಗುವ ನೀರಿನ ಆಹಾರ ಮಾದರಿಯನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಪರಿಶೀಲನೆಯ ವೇಳೆ ಕೆಲವು ಘಟಕಗಳಲ್ಲಿ ನೀರಿನ ಟ್ಯಾಂಕರ್ಗಳ ಮೂಲಕ ಸಿಹಿ ನೀರನ್ನು ಖರೀದಿಸಿ ಮಂಜುಗಡ್ಡೆ ತಯಾರಿಸಲಾಗುತ್ತಿರುವುದು ಕಂಡುಬಂದಿದೆ. ಮಂಜುಗಡ್ಡೆ ತಯಾರಿಕೆಗೆ ಬಳಸುವ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯದ ವರದಿಗಳನ್ನು ಪಡೆದ ಬಳಿಕವೇ ಮಂಜುಗಡ್ಡೆ ತಯಾರಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.
ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವತಿಯಿಂದ ನಡೆಸಲಾಗುತ್ತಿರುವ ಮಂಜುಗಡ್ಡೆ ತಯಾರಿಕಾ ಘಟಕವನ್ನೂ ಪರಿಶೀಲಿಸಲಾಯಿತು. ಇಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಶುದ್ಧ ಹಾಗೂ ಗುಣಮಟ್ಟದ ಮಂಜುಗಡ್ಡೆ ತಯಾರಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸಿ ಮೀನುಗಳ ಉತ್ತಮ ಗುಣಮಟ್ಟದ ಸಂರಕ್ಷಣೆಗೆ ಶುದ್ಧ ನೀರಿನಿಂದ ತಯಾರಿಸಿದ ಗುಣಮಟ್ಟದ ಮಂಜುಗಡ್ಡೆಯನ್ನು ಮಾತ್ರ ಬಳಸುವಂತೆ ಮೀನು ವ್ಯಾಪಾರಿಗಳು ಹಾಗೂ ಮಂಜುಗಡ್ಡೆ ತಯಾರಿಕಾ ಘಟಕಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಿರ್ದೇಶನ ನೀಡಿದೆ.

