KRGRV
Monday, September 21, 2026
Homeಜಿಲ್ಲಾ ಸುದ್ದಿಗಳುಮುಂದಿನ ಹಂಗಾಮಿನಲ್ಲಿ 6.33 ಲಕ್ಷ ಟನ್ ಕಬ್ಬು ಅರೆಯುವ ಗುರಿ: ಪರಪ್ಪ ಸವದಿ

ಮುಂದಿನ ಹಂಗಾಮಿನಲ್ಲಿ 6.33 ಲಕ್ಷ ಟನ್ ಕಬ್ಬು ಅರೆಯುವ ಗುರಿ: ಪರಪ್ಪ ಸವದಿ

ಅಥಣಿ: ಸಕ್ಕರೆ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದ್ದರೂ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಮುನ್ನೋಟದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕಾರ್ಖಾನೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಅಥಣಿ ವತಿಯಿಂದ 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಕಾರ್ಖಾನೆ ಆವರಣದಲ್ಲಿ ಅಧ್ಯಕ್ಷ ಪರಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 2025-26ನೇ ಸಾಲಿನ ಹಂಗಾಮು ನ.10, 2025ರಂದು ಆರಂಭವಾಗಿ ಫೆ.9, 2026ರಂದು ಮುಕ್ತಾಯಗೊಂಡಿದ್ದು, ಶೇ.11.51ರಷ್ಟು ಸಕ್ಕರೆ ಇಳುವರಿಯೊಂದಿಗೆ 5.33 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗಿದೆ. ಇದರಿಂದ 6.14 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ ಎಂದು ಅವರು ತಿಳಿಸಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ‘ರೈತರಿಂದ, ರೈತರಿಗಾಗಿ ಮತ್ತು ರೈತರಿಗೋಸ್ಕರ’ ಎಂಬ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಕಬ್ಬು ಪೂರೈಸಿದ ರೈತರಿಗೆ ಉತ್ತಮ ದರ ನೀಡುತ್ತಾ ಬಂದಿದ್ದು, ರೈತರ ಆರ್ಥಿಕ ಉನ್ನತಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕಾರ್ಖಾನೆ ಸಹಕಾರಿಯಾಗಿದೆ ಎಂದರು.

2025-26ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP)ಗಿಂತ ಹೆಚ್ಚಿನ ದರವನ್ನು ನಿಗದಿತ ಅವಧಿಯಲ್ಲಿ ಪಾವತಿಸಲಾಗಿದೆ ಎಂದು ಹೇಳಿದರು.

ಕಾರ್ಖಾನೆಯ ವ್ಯಾಪ್ತಿಯಲ್ಲಿ ಕಬ್ಬಿನ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಕಬ್ಬು ಅರೆಯಲು ಸಾಧ್ಯವಾಗಿಲ್ಲ. ಇದರಿಂದ 2025-26ನೇ ಸಾಲಿನಲ್ಲಿ ಕಾರ್ಖಾನೆಗೆ ನಿವ್ವಳ ಹಾನಿಯಾಗಿದೆ. ಮುಂಬರುವ ಹಂಗಾಮಿನಲ್ಲಿ ಉತ್ತಮ ಇಳುವರಿ ಹಾಗೂ ಸಕ್ಕರೆ ಅಂಶ ಹೊಂದಿರುವ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಪೂರೈಸುವ ಮೂಲಕ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಲು ರೈತರು ಸಹಕರಿಸಬೇಕು ಎಂದು ಪರಪ್ಪ ಸವದಿ ಮನವಿ ಮಾಡಿದರು.

“ಕಳೆದ ಹಂಗಾಮಿನಲ್ಲಿ 5.33 ಲಕ್ಷ ಟನ್ ಕಬ್ಬು ಅರೆಯಲಾಗಿದೆ. ಮುಂಬರುವ ಹಂಗಾಮಿನಲ್ಲಿ ಕನಿಷ್ಠ 6.33 ಲಕ್ಷ ಟನ್ ಕಬ್ಬು ಅರೆಯುವಂತೆ ರೈತರು ಸಹಕರಿಸಬೇಕು. ಇದು ರೈತರು ಕಟ್ಟಿದ ಕಾರ್ಖಾನೆ. ಇದರ ಉಳಿವು ಮತ್ತು ಬೆಳವಣಿಗೆ ರೈತರ ಕೈಯಲ್ಲಿದೆ” ಎಂದು ಹೇಳಿದ ಅವರು ಕಾರ್ಖಾನೆಗೆ ಕಬ್ಬು ಪೂರೈಸಿದ 15 ದಿನಗಳಲ್ಲಿಯೇ ರೈತರಿಗೆ ಕಬ್ಬಿನ ಬಿಲ್ ಪಾವತಿಸಲಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಖಾನೆಯ ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಅಧಿಕಾರಿಗಳು ಸದಾ ಸಿದ್ಧರಿದ್ದಾರೆ. ಖಾಸಗಿ ಕಾರ್ಖಾನೆಗಳಿಗಿಂತ ರೈತರಿಗೆ ಕೃಷ್ಣಾ ಕಾರ್ಖಾನೆಯಲ್ಲಿ ನೇರ ಸಂಪರ್ಕ ಹಾಗೂ ಸ್ಪಂದನೆ ದೊರೆಯುತ್ತಿದೆ ಎಂದರು.

ಕರ್ನಾಟಕದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪೈಕಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ತಾಂತ್ರಿಕ ವಿಭಾಗದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿದೆ. South India Sugar Technologists Association, Chennai ವತಿಯಿಂದ ನೀಡಲಾಗುವ Best Technical Efficiency Award 2025-26 ಪ್ರಶಸ್ತಿಗೆ ಕಾರ್ಖಾನೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಪರಪ್ಪ ಸವದಿ ಹೇಳಿದರು.

“ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕಬ್ಬಿನ ಇಳುವರಿ ಹೆಚ್ಚಾಗಲಿ. ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಕೃಷ್ಣಾ ಕಾರ್ಖಾನೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯ” ಎಂದು ಅವರು ಹೇಳಿದರು.

ಸಭೆಯಲ್ಲಿ ಎಸ್ . ಏ.ವಾಗಮೋಡೆ, ಜಿ.ಎಂ.ತೇವರಮನಿ, ಎಸ್.ಡಿ.ನಂದೀಶ್ವರ, ಜಿ.ಎಂ.ಜತ್ತಿ, ಎಸ್.ಜೆ.ಪಾಟಿಲ, ಶ್ರೀಮತಿ ಡಿ.ಎಸ್.ಕುಲಕರ್ಣಿ, ಶ್ರೀಮತಿ ಎಸ್.ಎಸ್.ನಾಯಿಕ, ಎಂ.ಎಂ.ಗೊಟಕಿಂಡಿ, ಎಸ್.ಎಚ್.ನಾಯಿಕ ಆರ್.ಏ.ಪಟ್ಟಣ, ಎಚ.ಐ.ಜಗದೇವ, ಪಿ.ಸಿ.ಪಾಟಿಲ ವಿ.ಎಂ.ಪಾಟಿಲ, ಜಿ.ಎಂ.ಪಾಟಿಲ ಯುವ ನಾಯಕ ಚಿದಾನಂದ ಸವದಿ, ಶಿವಕುಮಾರ್ ಸವದಿ, ಮಲ್ಲೇಶ್ ಸವದಿ, ರಮೇಶ್ ಸವದಿ, ಮಲ್ಲು ಸವದಿ, ವ್ಯವಸ್ಥಾಪಕರಾದ ಸುರೇಶ್ ಟಕ್ಕಣ್ಣವರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ರೈತರು ಹಾಗೂ ಕಾರ್ಖಾನೆ ಸಿಬ್ಬಂದಿ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ