ಯಾದಗಿರಿ: ನಗರದ ಉಮರ್ ಟ್ರೇಡರ್ಸ್ (Umar Traders, Shop No.39, Yadgiri) ಅಂಗಡಿಯಲ್ಲಿ ನಕಲಿ ಶೇಂಗಾ ಬೀಜ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ರೈತರು ಹೇಳುವ ಪ್ರಕಾರ, 4 ದಿನಗಳ ಹಿಂದೆ ಈ ಅಂಗಡಿಯಿಂದ ಖರೀದಿಸಿದ ಶೇಂಗಾ ಬೀಜವನ್ನು ಬಿತ್ತನೆ ಮಾಡಿದ್ದು, ಇಲ್ಲಿಯವರೆಗೂ ಒಂದು ಬೀಜವೂ ಮೊಳಕೆ ಒಡೆದಿಲ್ಲ. ಬೀಜ ನಾಟಿ ಮಾಡಿ ಕಾದು ಕುಳಿತ ರೈತರಿಗೆ ನಿರಾಸೆಯಾಗಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಮತ್ತು ಬಿತ್ತನೆಯ ಸಮಯವೂ ವ್ಯರ್ಥವಾಗಿದೆ.
ಈ ಬಗ್ಗೆ ಪ್ರಶ್ನಿಸಲು ಅಂಗಡಿಗೆ ಹೋದ ರೈತರಿಗೆ ಬೀಜ ವಿತರಕರು ಉಡಾಫೆಯ ಉತ್ತರ ನೀಡಿ, ದೌರ್ಜನ್ಯ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಸ್ಥಳದಲ್ಲಿ ರೈತರು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಂಗಡಿಯಲ್ಲಿರುವ ಬೀಜದ ಸ್ಟಾಕ್ ಪರಿಶೀಲಿಸಿ, ಲ್ಯಾಬ್ ಗೆ ಕಳುಹಿಸಿ, ನಕಲಿ ಬೀಜ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದ ಸಂದರ್ಭದಲ್ಲಿ ಬೀಜ ವಿತರಣೆ ಅಂಗಡಿ ಮುಂಭಾಗದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ರೈತರು ಆಗ್ರಹಿಸಿದ್ದಾರೆ

