KRGRV
Wednesday, September 30, 2026
Homeಜಿಲ್ಲಾ ಸುದ್ದಿಗಳುನಿಜಶರಣ ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ: ಕಲಬುರಗಿಯಲ್ಲಿ ಅಂಬಿಗರ ಸೇವಾದಳ ಪ್ರತಿಭಟನೆ

ನಿಜಶರಣ ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ: ಕಲಬುರಗಿಯಲ್ಲಿ ಅಂಬಿಗರ ಸೇವಾದಳ ಪ್ರತಿಭಟನೆ

ಕಲಬುರಗಿ, ಸೆಪ್ಟೆಂಬರ್ 29: 12ನೇ ಶತಮಾನದ ಮಹಾನ್ ವಚನಕಾರರು ಹಾಗೂ ಶಿವಶರಣರಾದ ನಿಜಶರಣ ಅಂಬಿಗರ ಚೌಡಯ್ಯ ಅವರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚೌಡದಾನಪುರದಲ್ಲಿರುವ ಮೂಲ ಗದ್ದುಗೆಗೆ ಸಮಗ್ರ ಅಭಿವೃದ್ಧಿ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸುವಂತೆ ಆಗ್ರಹಿಸಿ, ಅಂಬಿಗರ ಸೇವಾದಳದ ವತಿಯಿಂದ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಮುಖಂಡರು, ನಿಜಶರಣ ಅಂಬಿಗರ ಚೌಡಯ್ಯ ಅವರ ಗದ್ದುಗೆ ಕೇವಲ ಧಾರ್ಮಿಕ ಕ್ಷೇತ್ರವಲ್ಲ; ಅದು ಕನ್ನಡ ಸಂಸ್ಕೃತಿ, ವಚನ ಸಾಹಿತ್ಯ ಹಾಗೂ ಸಮಾನತೆಯ ಸಂದೇಶವನ್ನು ಸಾರಿದ ಐತಿಹಾಸಿಕ ಪರಂಪರೆಯ ಕೇಂದ್ರವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ವಿಶೇಷ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಕಾನೂನುಬದ್ಧ ಸ್ಥಾನಮಾನ ನೀಡಿ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು, ಚೌಡದಾನಪುರದಲ್ಲಿರುವ ಗದ್ದುಗೆಯನ್ನು ರಾಜ್ಯದ ಪ್ರಮುಖ ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಗೃಹಗಳು, ಮಾಹಿತಿ ಕೇಂದ್ರ, ಕುಡಿಯುವ ನೀರು, ಸ್ವಚ್ಛತಾ ವ್ಯವಸ್ಥೆ, ರಸ್ತೆ ಸಂಪರ್ಕ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡುವುದರ ಜೊತೆಗೆ, ಮುಂಬರುವ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಮಾಜದ ಮುಖಂಡರು, ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾನತೆ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಮಹಾನ್ ಶರಣರಾಗಿದ್ದಾರೆ. ಅವರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಗದ್ದುಗೆಯನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರು ಹಾಗೂ ಸಮಾಜದ ಮುಖಂಡರಾದ ಶರಣಪ್ಪ ತಳವಾರ, ಶಾಂತಪ್ಪ ಕೂಡಿ, ಬಸವರಾಜ ಬೂದಿಹಾಳ, ಸಂತೋಷ ಎಸ್. ಬೆಣ್ಣೂರ, ಶಿವಾನಂದ ಹೊನಗುಂಟಿ, ವಿಶ್ವನಾಥ ಮೂಲಗೆ, ದಶರಥ ನಾಯಿಕೋಡಿ, ಜಗನ್ನಾಥ ಜಮಾದಾರ, ನಂದು ಜೀವಣಗಿ, ಶರಣು ಮಲ್ಲಾಬಾದಿ, ಸಿದ್ದು ನಾಟೀಕಾರ ನಂದೂರ, ಸಂತೋಷ ಹಿಪ್ಪರಗಿ, ಅಶೋಕ್ ಕದ್ದರ್ಗಿ, ವಿನೀತ್ ಸಾದ್ಲಾಪುರ, ಶ್ರೀಕಾಂತ್ ಕದ್ದರ್ಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆ ಬಳಿಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಅಂಬಿಗರ ಸೇವಾದಳದ ಪದಾಧಿಕಾರಿಗಳು, ಚೌಡಯ್ಯನವರ ಗದ್ದುಗೆ ಅಭಿವೃದ್ಧಿಗೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಹೆಚ್ಚಿನ ಸುದ್ದಿ