ಅಥಣಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ಸಚಿವ ಹಾಗೂ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.
ರೆಡ್ಡೇರಹಟ್ಟಿ ಗ್ರಾಮದ ಶ್ರೀ ಮಟ್ಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಸತ್ತಿ ಗ್ರಾಮದ ವಾಸಪ್ಪನ ತೋಟ ಹಾಗೂ ಗಾಯಕ್ವಾಡ ತೋಟದಲ್ಲಿ ನಿರಂತರ ಜ್ಯೋತಿ ಯೋಜನೆ ಉದ್ಘಾಟನೆ, 0 ಪಾಯಿಂಟ್ನಿಂದ ನಂದಗಾಂವವರೆಗೆ 1.50 ಕಿ.ಮೀ. ರಸ್ತೆ ನಿರ್ಮಾಣ, ನಂದಗಾಂವ ಮುಖ್ಯ ರಸ್ತೆಯಿಂದ ಗೊರಕ ಹೊನಕಡಬಿ ಮನೆವರೆಗೆ ಸಿಸಿ ರಸ್ತೆ, ಶ್ರೀ ರಾಮದೇವ ಸಮುದಾಯ ಭವನ, ನಂದಗಾಂವ-ಈಚಲ ರಸ್ತೆ 1.50 ಕಿ.ಮೀ. ರಸ್ತೆ ನಿರ್ಮಾಣ ಹಾಗೂ ನಂದಗಾಂವದಲ್ಲಿ 1 ಕಿ.ಮೀ. ರಸ್ತೆ ಡಾಂಬರೀಕರಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, “ಬಸವೇಶ್ವರ ದೇವರ ದರ್ಶನಕ್ಕೆ ಹೊರಗಿನಿಂದ ಆಗಮಿಸುವ ಭಕ್ತರು ಹಾಗೂ ಸ್ಥಳೀಯರಿಗೆ ವಸತಿ ಸೌಕರ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ,” ಎಂದರು.
“ಮುಖ್ಯಮಂತ್ರಿಗಳು ಅಥಣಿ ಕ್ಷೇತ್ರದ ಅಭಿವೃದ್ಧಿಗೆ ₹10 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಈ ಅನುದಾನವನ್ನು ವಿವಿಧ ಸಮುದಾಯಗಳ ದೇವಸ್ಥಾನಗಳು, ಸಮುದಾಯ ಭವನಗಳು ಹಾಗೂ ರಸ್ತೆಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ.
“ಸರ್ಕಾರದಿಂದ ಅನುದಾನ ತಂದುಕೊಡುವುದು ನಮ್ಮ ಜವಾಬ್ದಾರಿ. ಅದನ್ನು ಗುಣಮಟ್ಟದಿಂದ ಬಳಸಿಕೊಳ್ಳುವುದು ಗ್ರಾಮಸ್ಥರು ಹಾಗೂ ಸಾರ್ವಜನಿಕರ ಜವಾಬ್ದಾರಿ,” ಎಂದು ಸವದಿ ಹೇಳಿದರು.
ರೆಡ್ಡೇರಹಟ್ಟಿ ಗ್ರಾಮದ ಧಾರ್ಮಿಕ ಶ್ರದ್ಧೆಯನ್ನು ಶ್ಲಾಘಿಸಿದ ಸವದಿ, ಗ್ರಾಮದ ಇಂಚಗೇರಿ ಸಂಪ್ರದಾಯದ ಮಂದಿರವನ್ನು ಗ್ರಾಮಸ್ಥರೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಮಟ್ಟಿ ಬಸವೇಶ್ವರ ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸುವ ಸಂಕಲ್ಪವನ್ನು ಗ್ರಾಮಸ್ಥರು ಕೈಗೊಂಡಿದ್ದು, ಈಗಾಗಲೇ ಸುಮಾರು 1 ಕೋಟಿ ಹಣವನ್ನು ದೇವಸ್ಥಾನ ನಿರ್ಮಾಣಕ್ಕೆ ಮೀಸಲಿಟ್ಟಿರುವುದನ್ನು ಶ್ಲಾಘಿಸಿದರು.
“ದೇವರ ಮೇಲಿನ ಭಕ್ತಿಯಿಂದ ಜನರು ತಮ್ಮ ದುಡಿಮೆಯ ಹಣದಲ್ಲಿ ಸ್ವಲ್ಪ ಭಾಗವನ್ನು ದೇವರ ಕಾರ್ಯಕ್ಕೆ ಅರ್ಪಿಸುವುದು ಶ್ಲಾಘನೀಯ. ದೇವಸ್ಥಾನ ನಿರ್ಮಾಣಕ್ಕೆ ಸರ್ಕಾರದಿಂದ, ಶಾಸಕರ ನಿಧಿಯಿಂದ ಹಾಗೂ ಮುಜರಾಯಿ ಇಲಾಖೆಯಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,” ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಬೆಲೆ ನಿಗದಿ ಕುರಿತು ಕೇಂದ್ರ ಸರ್ಕಾರ ಕರೆದಿರುವ ಸಭೆಯಲ್ಲಿ ರಾಜ್ಯದ ರೈತರ ಪರವಾಗಿ ಸಮರ್ಥವಾಗಿ ವಾದ ಮಂಡಿಸುವುದಾಗಿ ಲಕ್ಷ್ಮಣ ಸವದಿ ಹೇಳಿದರು.
“ನಾನು ಸಹಕಾರ ಸಚಿವನಾಗಿ ಮಾತ್ರವಲ್ಲ, ಒಬ್ಬ ರೈತನ ಮಗನಾಗಿ ದೆಹಲಿಗೆ ತೆರಳುತ್ತಿದ್ದೇನೆ. ಕಬ್ಬು ಬೆಳೆಯಲು ರೈತರಿಗೆ ತಗಲುವ ವೆಚ್ಚ ಹಾಗೂ ಅವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆ ದೊರಕುವಂತೆ ಕೇಂದ್ರ ಸರ್ಕಾರದ ಮುಂದೆ ಸಮಗ್ರವಾಗಿ ಮಂಡಿಸುತ್ತೇನೆ,” ಎಂದರು.
ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಕುರಿತು ಚರ್ಚೆ ನಡೆದಿದ್ದು, ಪ್ರಸ್ತುತ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನೀತಿ ಸಂಹಿತೆಯಿಂದಾಗಿ ನಿರ್ಧಾರವನ್ನು ತಡೆಹಿಡಿಯಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೋರಲಾಗುವುದು. ಆಯೋಗ ಒಪ್ಪಿಗೆ ನೀಡಿದರೆ ಸಚಿವ ಸಂಪುಟದಲ್ಲಿ ಮತ್ತೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು. ಒಪ್ಪಿಗೆ ದೊರೆಯದಿದ್ದರೆ ನೀತಿ ಸಂಹಿತೆ ಮುಗಿದ ಬಳಿಕ ಹಾಲಿನ ದರ ಹೆಚ್ಚಳ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಥಣಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ನೀರಾವರಿ, ಸಮುದಾಯ ಭವನ, ದೇವಸ್ಥಾನ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮಕ್ಕೂ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವ ಮೂಲಕ ಅಥಣಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ತಮ್ಮ ಗುರಿಯಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಅಭಿವೃದ್ಧಿ ಕಾಮಗಾರಿಗಳು ಕೇವಲ ಘೋಷಣೆಗೆ ಸೀಮಿತವಾಗದೆ, ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಜನರಿಗೆ ಅದರ ಪ್ರಯೋಜನ ತಲುಪಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆ
ವಿರೋಧ ಪಕ್ಷದವರು ಶಾಸಕರು, ಸಚಿವರು ಹಾಗೂ ಅಧಿಕಾರಿಗಳನ್ನು ಸಿಲುಕಿಸಲು ಮೋಸದ ಜಾಲ ಹೆಣೆಯುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಮುಖ್ಯಮಂತ್ರಿಗಳು ಸಚಿವರು ಹಾಗೂ ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಮತ್ತು ಜಾಗರೂಕತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದು, ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡುವಂತೆ ಮಾರ್ಗದರ್ಶನ ನೀಡಿದ್ದಾರೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದರು

