KRGRV
Saturday, September 26, 2026
Homeರಾಜಕೀಯವಿಬಿಜಿ ರಾಮ್ ಜಿ ತ್ರೈಮಾಸಿಕಕ್ಕೆ ರಾಜ್ಯದಿಂದ 1200 ಕೋಟಿ ರೂ. :ಈಶ್ವರ ಖಂಡ್ರೆ

ವಿಬಿಜಿ ರಾಮ್ ಜಿ ತ್ರೈಮಾಸಿಕಕ್ಕೆ ರಾಜ್ಯದಿಂದ 1200 ಕೋಟಿ ರೂ. :ಈಶ್ವರ ಖಂಡ್ರೆ

ವಿಧಾನಸಭೆ, ಸೆ.24: ವಿಬಿಜಿ ರಾಮ್ ಜಿಯಡಿ ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ಪ್ರಸಕ್ತ ತ್ರೈಮಾಸಿಕಕ್ಕೆ ರಾಜ್ಯ ಸರ್ಕಾರ 1200 ಕೋಟಿ ರೂ. ತೆಗೆದಿರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.

ಬರದ ಮೇಲಿನ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಈ ಸಾಲಿನಲ್ಲಿ ಕೇಂದ್ರ ಸರ್ಕಾರ60:40 ಅನುಪಾತದಡಿ ರಾಜ್ಯಕ್ಕೆ ವಿಬಿಜಿ ರಾಮ್ ಜಿ ಅಡಿ 5706 ಕೋಟಿ ರೂ. ಹಂಚಿಕೆ ಮಾಡಿದ್ದು, ರಾಜ್ಯ ಸರ್ಕಾರ 3806 ಕೋಟಿ ರೂ. ಭರಿಸುತ್ತಿದೆ. ಆಯವ್ಯಯದಲ್ಲಿ 500 ಕೋಟಿ ರೂ. ತೆಗೆದಿರಿಸಲಾಗಿತ್ತು. ಪೂರಕ ಅಂದಾಜಿನಲ್ಲಿ ಹೆಚ್ಚಿನ ಹಣ ನೀಡಿ ಯೋಜನೆ ಆರಂಭಿಸಲಾಗಿದೆ ಎಂದರು.

ಯೋಜನೆ ಕಾರ್ಯಾನುಷ್ಠಾನದ ಬಗ್ಗೆ ಸಿಇಓಗಳೊಂದಿಗೆ ನಿಯಮಿತವಾಗಿ ವರ್ಚುವಲ್ ಸಭೆ ನಡೆಸುತ್ತಿದ್ದು, ಪ್ರಮಾಣಿತ ಕಾರ್ಯಾಚರಣೆ ಮಾನದಂಡ (ಎಸ್.ಓ.ಪಿ.) ಜಾರಿ ಮಾಡಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು, ಕೃಷಿ ಹೊಂಡ ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಹೂಳೆತ್ತುವುದು, ನಾಲೆಗಳ ಸ್ವಚ್ಛತೆ ಸೇರಿದಂತೆ 318 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ತ್ರೈಮಾಸಿಕದಲ್ಲಿ ಕೇಂದ್ರದ 1700 ಕೋಟಿ ರೂ. ಹಾಗೂ ರಾಜ್ಯದ 1200 ಕೋಟಿ ರೂ. ಸೇರಿ 2900 ಕೋಟಿ ರೂ. ಲಭ್ಯವಿದ್ದು, ವಿಬಿಜಿ ರಾಮ್ ಜಿ ಅಡಿಯಲ್ಲಿ ಗ್ರಾಮೀಣ ಬಡವರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಈ ಹಿಂದೆ ಮನ್ರೇಗಾದಡಿ ಕೇಂದ್ರ ಸರ್ಕಾರ 90ರಷ್ಟು ಅನುದಾನ ನೀಡುತ್ತಿತ್ತು. ರಾಜ್ಯ ಸರ್ಕಾರ ಕೇವಲ 10ರಷ್ಟು ಭರಿಸುತ್ತಿತ್ತು. ಕಳೆದ 20 ವರ್ಷದಲ್ಲಿ 61 ಸಾವಿರ ಕೋಟಿ ರೂ. ವೆಚ್ಚ ಮಾಡಿ 182 ಕೋಟಿ ಮಾನವ ದಿನ ಸೃಷ್ಟಿಸಲಾಗಿತ್ತು. ಕೇಂದ್ರ ಸರ್ಕಾರ 56 ಸಾವಿರ ಕೋಟಿ ರೂ. ಭರಿಸಿದ್ದರೆ, ರಾಜ್ಯ ಸರ್ಕಾರ 4800 ಕೋಟಿ ರೂ. ಭರಿಸಿತ್ತು ಎಂದು ವಿವರಿಸಿದರು.

ಹೆಚ್ಚಿನ ಸುದ್ದಿ