ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ಪ್ರಕರಣ; ರಿತೇಶ್ ಪಾಂಡೆ ವಿಚಾರಣೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ವಿಡಿಯೋ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದಲ್ಲಿ ಬಳಸಲಾದ ಮೊಬೈಲ್ ಫೋನ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ಅಧಿಕೃತ ನಿವಾಸದಲ್ಲೇ ಹಸ್ತಾಂತರವಾಗಿತ್ತು ಎಂದು ಆರೋಪಿ ರಿತೇಶ್ ಪಾಂಡೆ ವಿಚಾರಣೆ ವೇಳೆ ತಿಳಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ಅಕ್ಟೋಬರ್ 24ರಂದು ರಿತೇಶ್ ಪಾಂಡೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಮೊಬೈಲ್ ಖರೀದಿ ಮತ್ತು ಹಸ್ತಾಂತರದ ಕುರಿತು ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕರೋಲ್ ಬಾಗ್ನಲ್ಲಿ ಖರೀದಿಸಿದ್ದ ಮೊಬೈಲ್
ತನಿಖೆಯ ಪ್ರಕಾರ, ದೆಹಲಿಯ ಕರೋಲ್ ಬಾಗ್ನಲ್ಲಿರುವ ಅಂಗಡಿಯೊಂದರಿಂದ ಸ್ಟಿಂಗ್ ವಿಡಿಯೋ ಚಿತ್ರೀಕರಣಕ್ಕೆ ಬಳಸಲಾದ ಮೊಬೈಲ್ ಫೋನ್ ಖರೀದಿಸಲಾಗಿತ್ತು. ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ಮೊಬೈಲ್ ಖರೀದಿಸಿದ್ದರು ಎಂದು ತಿಳಿದುಬಂದಿದೆ.
ನಂತರ ಖರೀದಿಸಿದ ಮೊಬೈಲ್ನ್ನು ದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸದಲ್ಲೇ ಪ್ರಜ್ವಲ್ ಪ್ರಸಾದ್ ಅವರಿಗೆ ಹಸ್ತಾಂತರಿಸಲಾಗಿತ್ತು ಎಂದು ರಿತೇಶ್ ಪಾಂಡೆ ಹೇಳಿಕೆ ನೀಡಿರುವುದಾಗಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮೂವರ ಪಾತ್ರದ ಬಗ್ಗೆ ತನಿಖೆ
ಈ ಪ್ರಕರಣದಲ್ಲಿ ರಿತೇಶ್ ಪಾಂಡೆ, ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಪ್ರಮುಖವಾಗಿ ಭಾಗಿಯಾಗಿರುವ ಬಗ್ಗೆ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ಗಳಾಗಿ ಸಕ್ರಿಯರಾಗಿದ್ದ ಈ ಮೂವರು ಯಾರ ಸೂಚನೆಯ ಮೇರೆಗೆ ಈ ಕೃತ್ಯ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.
ಹಣಕಾಸು ವಹಿವಾಟಿನ ಪರಿಶೀಲನೆ
ರಿತೇಶ್ ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ನಡುವೆ ನಡೆದಿರುವ ಕೆಲವು ಅನುಮಾನಾಸ್ಪದ ಹಣಕಾಸು ವಹಿವಾಟುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಅವರಿಗೆ ನೋಟಿಸ್ ನೀಡಲಾಗಿದ್ದು, ಇಬ್ಬರೂ ವಿಚಾರಣೆಗೆ ಹಾಜರಾಗದೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭಾವಿ ವ್ಯಕ್ತಿಗಳ ಕೈವಾಡದ ಶೋಧ
ಸ್ಟಿಂಗ್ ವಿಡಿಯೋ ಪ್ರಕರಣದ ಹಿಂದೆ ಯಾರಿದ್ದಾರೆ, ಯಾರ ಸೂಚನೆಯ ಮೇರೆಗೆ ಈ ಕೃತ್ಯ ನಡೆದಿದೆ ಹಾಗೂ ಇದರ ಹಿಂದೆ ಯಾವುದೇ ಪ್ರಭಾವಿ ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

