ತುಮಕೂರು : ತೀವ್ರ ಗಾಯಗೊಂಡಿದ್ದ ಹಸುವಿಗೆ ತುರ್ತು ಪಶುವೈದ್ಯಕೀಯ ಚಿಕಿತ್ಸೆ ದೊರಕಿಸುವಲ್ಲಿ ಮುಖ್ಯಮಂತ್ರಿ ಕಚೇರಿ ಕೇವಲ ಒಂದು ಗಂಟೆಯೊಳಗೆ ಸ್ಪಂದಿಸಿ, ರೈತನ ನೆರವಿಗೆ ಧಾವಿಸಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಕುಣಿಗಲ್ ತಾಲೂಕಿನ ಶೋಭಗಾನಹಳ್ಳಿ ಗ್ರಾಮದ ರೈತರೊಬ್ಬರ ಹಸುವಿಗೆ ಕಣ್ಣಿನ ಬಳಿ ಗಂಭೀರ ಗಾಯವಾಗಿತ್ತು. ತುರ್ತು ಸಂದರ್ಭದಲ್ಲಿ ಪಶುವೈದ್ಯಕೀಯ ನೆರವು ಸಿಗದೆ ರೈತರು ಆತಂಕಕ್ಕೊಳಗಾಗಿದ್ದರು. ಈ ಕುರಿತು ಮುಖ್ಯಮಂತ್ರಿಗಳ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ಇ-ಮೇಲ್ ಮೂಲಕ ಮಾಹಿತಿ ಸಲ್ಲಿಸಲಾಗಿತ್ತು.
ಮಾಹಿತಿ ತಲುಪಿದ ಕೇವಲ ಒಂದು ಗಂಟೆಯೊಳಗೆ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ತುರ್ತು ಸೂಚನೆ ನೀಡಿದರು.
ಸಿಎಂ ಕಚೇರಿಯ ನಿರ್ದೇಶನದ ಮೇರೆಗೆ ಪಶುವೈದ್ಯರಾದ ಡಾ. ರಾಮಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಹಸುವಿನ ಪರಿಶೀಲನೆ ನಡೆಸಿದರು. ಗಾಯವನ್ನು ಸ್ವಚ್ಛಗೊಳಿಸಿ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ ಔಷಧಿಗಳನ್ನು ಒದಗಿಸಿದರು.
ತುರ್ತು ಸಂದರ್ಭದಲ್ಲಿ ಸ್ಪಂದಿಸಿ ರೈತನ ನೆರವಿಗೆ ಬಂದ ಮುಖ್ಯಮಂತ್ರಿ ಕಚೇರಿಯ ಕ್ರಮಕ್ಕೆ ಗ್ರಾಮಸ್ಥರು ಹಾಗೂ ರೈತರ ಕುಟುಂಬದವರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದ್ದಾರೆ.
ಇದೇ ವೇಳೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಪರಿಶೀಲನೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

