ಹೈಕೋರ್ಟ್ ಆದೇಶಕ್ಕೆ ಗೌರವ ನೀಡಿ ಎಸ್‌ಐಟಿ ತನಿಖೆಗೆ ಸಹಕರಿಸಿ: ಬಿಜೆಪಿ ಆಗ್ರಹ
ಬೆಂಗಳೂರು, ಸೆಪ್ಟೆಂಬರ್ 27 : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಒಎಂಆರ್ (OMR) ಶೀಟ್ ಅಕ್ರಮ ತಿದ್ದುಪಡಿ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶಿಸಿರುವ ವಿಶೇಷ ತನಿಖಾ ತಂಡದ (SIT) ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಶ್ರೀ ಎನ್. ರವಿಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುವ ಸ್ವತಂತ್ರ ತನಿಖೆಯನ್ನು ತಡೆಯಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ಐವರು ಸದಸ್ಯರ ಎಸ್‌ಐಟಿ ತಂಡಕ್ಕೆ ತನಿಖೆಯ ಜವಾಬ್ದಾರಿ ನೀಡಿರುವ ಹೈಕೋರ್ಟ್ ಆದೇಶದ ಬಗ್ಗೆ ಸರ್ಕಾರಕ್ಕೆ ಏಕೆ ಆಕ್ಷೇಪವಿದೆ ಎಂದು ಪ್ರಶ್ನಿಸಿರುವ ರವಿಕುಮಾರ್, “ಸ್ವಂತ ರಾಜ್ಯದ ದಕ್ಷ ಐಪಿಎಸ್ ಅಧಿಕಾರಿಗಳ ಮೇಲೆಯೇ ಕಾಂಗ್ರೆಸ್ ಸರ್ಕಾರಕ್ಕೆ ನಂಬಿಕೆ ಇಲ್ಲವೇ? ಅಥವಾ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆದರೆ ಪ್ರಭಾವಿ ಸಚಿವರು ಮತ್ತು ಅಧಿಕಾರಿಗಳ ಪಾತ್ರ ಬಹಿರಂಗವಾಗುವ ಭಯವೇ?” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಸಿಐಡಿ ತನಿಖೆಯ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸಿದ ಅವರು, ಹೈಕೋರ್ಟ್ ಇದನ್ನು ಗಮನಿಸಿ ತನಿಖೆಯನ್ನು ಸ್ವತಂತ್ರ ಎಸ್‌ಐಟಿಗೆ ವಹಿಸಿದೆ. ಇದೀಗ ಅದನ್ನೂ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ತೆರಳುತ್ತಿರುವುದು ಸತ್ಯವನ್ನು ಮರೆಮಾಚುವ ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಬದಲು ಪಾರದರ್ಶಕ ತನಿಖೆಗೆ ಅವಕಾಶ ನೀಡಬೇಕು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರ ರಕ್ಷಣೆಗೆ ಸಾರ್ವಜನಿಕ ಹಣವನ್ನು ಬಳಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
- ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಉದ್ದೇಶಿಸಿರುವ ಮೇಲ್ಮನವಿಯನ್ನು ತಕ್ಷಣ ಹಿಂಪಡೆದು ಹೈಕೋರ್ಟ್ ಆದೇಶದಂತೆ ಎಸ್‌ಐಟಿ ತನಿಖೆಗೆ ಸಹಕರಿಸಬೇಕು.
- ತನಿಖೆಗೆ ಅಡ್ಡಿಪಡಿಸುತ್ತಿರುವ ಸಂಬಂಧಪಟ್ಟ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು.
- ಹಗರಣದ ಹಿಂದಿರುವ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ವಂಚಿತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಪಾರದರ್ಶಕ ಮರುಪರೀಕ್ಷೆ ನಡೆಸಬೇಕು.
“ಕಾಂಗ್ರೆಸ್ ಸರ್ಕಾರ ಎಷ್ಟೇ ಕಾನೂನು ಹೋರಾಟ ನಡೆಸಿದರೂ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹೈಕೋರ್ಟ್ ಮೇಲ್ವಿಚಾರಣೆಯ ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿದೆ. ಯುವಜನರ ಭವಿಷ್ಯದ ಜೊತೆ ಆಟವಾಡಿದವರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ” ಎಂದು ಎನ್. ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

