KRGRV
Saturday, October 31, 2026
Homeಜಿಲ್ಲಾ ಸುದ್ದಿಗಳುಕಬ್ಬಿಗೆ ₹5,500 ದರ ನಿಗದಿಪಡಿಸಿ; ಇಲ್ಲದಿದ್ದರೆ ಅ.31ಕ್ಕೆ ಅಹೋರಾತ್ರಿ ಹೆದ್ದಾರಿ ಬಂದ್!ಸರ್ಕಾರ–ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತ...

ಕಬ್ಬಿಗೆ ₹5,500 ದರ ನಿಗದಿಪಡಿಸಿ; ಇಲ್ಲದಿದ್ದರೆ ಅ.31ಕ್ಕೆ ಅಹೋರಾತ್ರಿ ಹೆದ್ದಾರಿ ಬಂದ್!ಸರ್ಕಾರ–ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಆಕ್ರೋಶ

ಮುದ್ದೇಬಿಹಾಳ: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡುವಲ್ಲಿ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ, ಪ್ರತಿ ಟನ್ ಕಬ್ಬಿಗೆ ಒಟ್ಟು ₹5,500 ದರ ನಿಗದಿಪಡಿಸಬೇಕು. ಇಲ್ಲದಿದ್ದರೆ ಸಾವಿರಾರು ರೈತರೊಂದಿಗೆ ಅ.31ಕ್ಕೆರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4,500 ಹಾಗೂ ರಾಜ್ಯ ಸರ್ಕಾರ ₹1,000 ಎಸ್‌ಎಪಿ (ರಾಜ್ಯ ಸಲಹಾ ಬೆಲೆ) ನೀಡುವ ಮೂಲಕ ರೈತರಿಗೆ ಒಟ್ಟು ₹5,500 ದರ ದೊರಕಿಸಿಕೊಡಬೇಕು. ಆದರೆ ರೈತರ ಬೇಡಿಕೆಯನ್ನು ತಪ್ಪಾಗಿ ಅರ್ಥೈಸಿ, ಒಮ್ಮೆ ₹4,000, ಮತ್ತೊಮ್ಮೆ ₹4,500, ಇನ್ನೊಮ್ಮೆ ₹5,500 ಕೇಳುತ್ತಿದ್ದಾರೆ ಎಂದು ಸರ್ಕಾರವೇ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ನೆರೆಯ ಮಹಾರಾಷ್ಟ್ರ ಸೇರಿದಂತೆ ತಮಿಳುನಾಡು, ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಎಸ್‌ಎಪಿ ಜಾರಿಗೊಳಿಸಬೇಕು. ಕಬ್ಬು ಬೆಳೆಗಾರರಿಂದ ಸಕ್ಕರೆ ಸೆಸ್, ಎಥೆನಾಲ್ ಮತ್ತು ಅಬಕಾರಿ ಇಲಾಖೆಯ ಮೂಲಕ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ಬರುತ್ತಿದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬರ ಪರಿಹಾರ ನೀಡುವ ವಿಚಾರದಲ್ಲಿಯೂ ಸರ್ಕಾರದ ನಿರ್ಲಕ್ಷ್ಯ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರನ್ನು ಮಧ್ಯಾಹ್ನವೇ ಕರೆಸಿ ಸಂಜೆ 7 ಗಂಟೆಯವರೆಗೆ ಕಾಯಿಸಲಾಗಿದೆ. ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಸಮರ್ಪಕವಾಗಿ ಮಂಡಿಸಲು ಅವಕಾಶ ನೀಡದೆ, ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆಯನ್ನೂ ಕಲ್ಪಿಸದೆ ರೈತರನ್ನು ಕಡೆಗಣಿಸಲಾಗಿದೆ. ರೈತರ ಹಿತಕ್ಕಿಂತ ಕಾರ್ಖಾನೆ ಮಾಲೀಕರ ಹಿತಾಸಕ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ದೂರಿದರು.

ಇದೇ ವೇಳೆ ಮುದ್ದೇಬಿಹಾಳ ಹಾಗೂ ತಂಗಡಗಿ ಭಾಗದಲ್ಲಿ ಬೆಳೆ ಸಮೀಕ್ಷೆ ನಡೆಸುವಾಗ ಗಂಭೀರ ಲೋಪಗಳಾಗಿವೆ. ವಿಮಾ ಕಂಪನಿಗಳು ಹಾಗೂ ಅಧಿಕಾರಿಗಳು ನಿಯಮಗಳನ್ನು ಪಾಲಿಸದೆ, ಕಟಾವು ಮುಗಿದ ಹೊಲಗಳು ಮತ್ತು ನೀರಾವರಿ ಪ್ರದೇಶಗಳಲ್ಲಿಯೂ ಎಫ್‌1, ಎಫ್‌2 ಸಮೀಕ್ಷೆ ನಡೆಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಕುರಿತು ಶಾಸಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಹೊಲಗಳಿಗೆ ಭೇಟಿ ನೀಡಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬರಗಾಲದಿಂದ ಕಬ್ಬು ಬೆಳೆ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ಜವಾಬ್ದಾರಿಯಿಂದ ವರ್ತಿಸಬೇಕು. ರೈತರಿಗೆ ₹5,500 ದರ ನೀಡುವ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಲು ಸರ್ಕಾರಕ್ಕೆ ಸಂಜೆ 5 ಗಂಟೆಯವರೆಗೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಸೂಕ್ತ ತೀರ್ಮಾನ ಪ್ರಕಟಿಸದಿದ್ದರೆ ಯಲಗೂರು ದೇವಸ್ಥಾನದ ಬಳಿ ಸಾವಿರಾರು ರೈತರು ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಹೋರಾಟ ನಡೆಸಲಿದ್ದಾರೆ ಎಂದು ಶಾಂತಗೌಡ ಪಾಟೀಲ ನಡಹಳ್ಳಿ ಎಚ್ಚರಿಸಿದರು.

ಹೆಚ್ಚಿನ ಸುದ್ದಿ