KRGRV
Friday, October 30, 2026
Homeಜಿಲ್ಲಾ ಸುದ್ದಿಗಳುಮೊದಲ ಪ್ರಯತ್ನದಲ್ಲೇ ರಾಜ್ಯಮಟ್ಟದಲ್ಲಿ ಕಂಚಿನ ಪದಕದ ಸಾಧನೆ!ನಾಗರಬೆಟ್ಟದ ಎಸ್‌ಡಿಕೆ ಪ್ರೌಢಶಾಲೆಯ ಹೃದಯಾನಂದ ಕೊಪ್ಪಗೆ ಸ್ಕೇಟಿಂಗ್‌ನಲ್ಲಿ ತೃತೀಯ...

ಮೊದಲ ಪ್ರಯತ್ನದಲ್ಲೇ ರಾಜ್ಯಮಟ್ಟದಲ್ಲಿ ಕಂಚಿನ ಪದಕದ ಸಾಧನೆ!ನಾಗರಬೆಟ್ಟದ ಎಸ್‌ಡಿಕೆ ಪ್ರೌಢಶಾಲೆಯ ಹೃದಯಾನಂದ ಕೊಪ್ಪಗೆ ಸ್ಕೇಟಿಂಗ್‌ನಲ್ಲಿ ತೃತೀಯ ಸ್ಥಾನ; ಏಕಲವ್ಯ ಅಕಾಡೆಮಿಯ ತರಬೇತಿ ಫಲ: ವಿಜಯಪುರ ಜಿಲ್ಲೆಗೆ ಕೀರ್ತಿ ತಂದ ಪ್ರತಿಭೆ

ಮುದ್ದೇಬಿಹಾಳ:
ಮೊದಲ ಪ್ರಯತ್ನದಲ್ಲೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಎಸ್‌ಡಿಕೆ ಪ್ರೌಢಶಾಲೆಯ ವಿದ್ಯಾರ್ಥಿ ಹೃದಯಾನಂದ ಅ. ಕೊಪ್ಪ ಕ್ರೀಡಾ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026–27ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಹೃದಯಾನಂದ ಅವರು ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಸ್ಕೇಟಿಂಗ್ ಕ್ವಾಡ್ 500 ಮೀಟರ್ (ರಿಂಗ್-1) ವಿಭಾಗದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅವರು, ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಈ ಸಾಧನೆ ಮಾಡಿದ್ದಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಕ್ರೀಡಾಪಟುಗಳ ಪಾಲಿಗೆ ಮಹತ್ವದ ಸಾಧನೆಯಾಗಿದ್ದು, ಮೊದಲ ಅವಕಾಶದಲ್ಲೇ ಹೃದಯಾನಂದ ಈ ಗುರಿ ತಲುಪಿರುವುದು ವಿಶೇಷವಾಗಿದೆ. ಅವರ ಸಾಧನೆಯಿಂದ ವಿಜಯಪುರ ಜಿಲ್ಲೆ ಹಾಗೂ ನಾಗರಬೆಟ್ಟದ ಶಾಲೆಯ ಕೀರ್ತಿ ಹೆಚ್ಚಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಯೂ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಲು ಪ್ರೇರಣೆಯಾಗಿದೆ.

ಹೃದಯಾನಂದ ಅವರ ಈ ಸಾಧನೆಯ ಹಿಂದೆ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ತರಬೇತಿಯೂ ಪ್ರಮುಖ ಪಾತ್ರ ವಹಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಪರಿಚಯಿಸಿ, ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವ ಅಕಾಡೆಮಿಯ ಸಂಸ್ಥಾಪಕ ಶಿವಕುಮಾರ ಶಾರದಳ್ಳಿ ಅವರು ಕ್ರೀಡಾ ಪ್ರತಿಭೆಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಅಕಾಡೆಮಿಯಲ್ಲಿ ತರಬೇತಿ ಪಡೆದ ಹೃದಯಾನಂದ ಅವರು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿರುವುದು ತರಬೇತಿ, ಶಿಸ್ತು, ನಿರಂತರ ಅಭ್ಯಾಸ ಹಾಗೂ ಪರಿಶ್ರಮದ ಮಹತ್ವವನ್ನು ಎತ್ತಿಹಿಡಿದಿದೆ. ಸೂಕ್ತ ಮಾರ್ಗದರ್ಶನ ಮತ್ತು ನಿರಂತರ ಪ್ರಯತ್ನ ದೊರೆತರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಹೃದಯಾನಂದ ಅವರ ಸಾಧನೆ ಸಾಕ್ಷಿಯಾಗಿದೆ.
ಹೃದಯಾನಂದ ಅವರ ಕ್ರೀಡಾ ಸಾಧನೆಗೆ ಏಕಲವ್ಯ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಸಂಸ್ಥಾಪಕ ಶಿವಕುಮಾರ ಶಾರದಳ್ಳಿ, ನಾಗರಬೆಟ್ಟ ಎಸ್‌ಡಿಕೆ ಪ್ರೌಢಶಾಲೆಯ ಮುಖ್ಯಸ್ಥ ಬಸಯ್ಯ ಗುರುಲಿಂಗಯ್ಯ ಮಠ ಹಾಗೂ ದೈಹಿಕ ಶಿಕ್ಷಕ ಎಲ್.ಎಚ್.ನಧಾಫ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ಆಸಕ್ತಿ ಬೆಳೆಸಿಕೊಂಡು ನಿರಂತರ ಅಭ್ಯಾಸಕ್ಕೆ ಒತ್ತು ನೀಡಬೇಕು. ಸಾಧನೆಗೆ ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸ ಅಗತ್ಯ ಎಂಬುದನ್ನು ಹೃದಯಾನಂದ ಅವರ ಯಶಸ್ಸು ತೋರಿಸಿಕೊಟ್ಟಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಕಂಚಿನ ಪದಕ ಗೆದ್ದಿರುವ ಹೃದಯಾನಂದ ಅವರು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡಿ ಉನ್ನತ ಮಟ್ಟದ ಸ್ಪರ್ಧೆಗಳಲ್ಲಿ ವಿಜಯ ಸಾಧಿಸಲಿ ಎಂದು ಪಾಲಕರಾದ ಅರವಿಂದ ಕೊಪ್ಪ, ಶಫೀಕ ಅಕ್ಕಲಕೋಟ ಹಾಗೂ ಇತರೆ ಕ್ರೀಡಾಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ